ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿನಹೊಳೆ: ಪರಿಹಾರ ತಾರತಮ್ಯ ನೀಗಲಿ- ನಂಜಾವಧೂತ ಸ್ವಾಮೀಜಿ

Published 7 ಮಾರ್ಚ್ 2024, 14:53 IST
Last Updated 7 ಮಾರ್ಚ್ 2024, 14:53 IST
ಅಕ್ಷರ ಗಾತ್ರ

ಕೊರಟಗೆರೆ: ಬಯಲು ಸೀಮೆಯಾದ ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಶೀಘ್ರ ಅನುಷ್ಠಾನ ಮಾಡಬೇಕು. ರೈತರ ಭೂಮಿಗೆ ಪರಿಹಾರ ತಾರತಮ್ಯವನ್ನು ದೂರ ಮಾಡಬೇಕು ಎಂದು ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.

ಕೋಳಾಲ ಹೋಬಳಿ ವ್ಯಾಪ್ತಿಯ ತಿಮ್ಮನಾಯಕನಹಳ್ಳಿ ಗ್ರಾಮದೇವತೆ ಮಾರಮ್ಮ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸ ಪ್ರತಿಷ್ಠಾ‍‍ಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಭಾಗದ ರೈತರು ಜಮೀನುಗಳನ್ನು ಎತ್ತಿನಹೊಳೆ ಯೋಜನೆಗೆ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ದೊಡ್ಡಬಳ್ಳಾಪುರ ಭಾಗದ ರೈತರಿಗೆ ಮತ್ತು ತುಮಕೂರು ಭಾಗದ ರೈತರಿಗೆ ಬೇರೆ, ಬೇರೆ ಪರಿಹಾರ ನೀಡುತ್ತಿರುವುದು ನ್ಯಾಯ ಸಮ್ಮತವಲ್ಲ. ಒಂದೇ ಬದುವಿನ ಎರಡು ಜಮೀನುಗಳಿಗೆ ಪರಿಹಾರ ತಾರತಮ್ಯ ಮಾಡಬಾರದು. ಕೂಡಲೇ ಸರ್ಕಾರ ಈ ತಾರತಮ್ಯ ಸರಿದೂಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿವರ್ಷ ನೀರಾವರಿ ಹಕ್ಕೊತ್ತಾಯ ಕಾರ್ಯಕ್ರಮವನ್ನು ಮಠದಿಂದ ರೈತರ ಜೊತೆಗೂಡಿ ಮಾಡಿಕೊಂಡು ಬರಲಾಗುತ್ತಿದೆ. ಈಗಾಗಲೇ ಭದ್ರ ಮೇಲ್ದಂಡೆ ಯೋಜನೆಯಲ್ಲಿ 22 ಟಿಎಂಸಿ, ಎತ್ತಿನಹೊಳೆ ಯೋಜನೆಯ 19 ಟಿಎಂಸಿ ನೀರನ್ನು ಹರಿಸುವ ಯೋಜನೆ ಶೀಘ್ರವಾಗಿ ಆಗಬೇಕು. ಕೈಗಾರಿಕೆಗಳಿಂದ ಭತ್ತ, ರಾಗಿ ಆಹಾರಧಾನ್ಯ ತಯಾರಿಸಲು ಸಾದ್ಯವಿಲ್ಲ. ಕೃಷಿ ಉದ್ಯಮ ಅಪಾಯದಲ್ಲಿದೆ. ಅದು ತೀವ್ರ ಸ್ವರೂಪ ಪಡೆಯುವ ಮುನ್ನ ರೈತರಿಗೆ ನೀರಾವರಿ ಯೋಜನೆ, ವೈಜ್ಞಾನಿಕ ಬೆಂಬಲ ಬೆಲೆ ಒದಗಿಸಲೇಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಗಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯ ನಾಗರಾಜು, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಮುಖಂಡರಾದ ಕೆಂಪಣ್ಣ, ವೀರಕ್ಯಾತರಾಯ, ಬೈರಪ್ಪ, ಚಿಕ್ಕರಂಗಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT