ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ: ವಾಹನ ಶುಲ್ಕ ವಿಧಿಸಿದರೆ ಕ್ರಮ

Published 19 ಮಾರ್ಚ್ 2024, 3:17 IST
Last Updated 19 ಮಾರ್ಚ್ 2024, 3:17 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ದೇವರಾಯನದುರ್ಗದ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬರುವ ವಾಹನಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬ್ರಹ್ಮೋತ್ಸವದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಜಾತ್ರಾ ಮಹೋತ್ಸವ ಈಗಾಗಲೇ ಆರಂಭವಾಗಿದ್ದು, ಮಾರ್ಚ್ 29ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಯ ವೇಳೆ ದೇವರಾಯನದುರ್ಗಕ್ಕೆ ಬರುವ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಕ್ರಮ ವಹಿಸಬೇಕು. ಬ್ರಹ್ಮ ರಥೋತ್ಸವಕ್ಕೆ ಸುಮಾರು 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದರು.

ದೇವರಾಯನದುರ್ಗಕ್ಕೆ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಬ್ರಹ್ಮರಥೋತ್ಸವದ ದಿನ ಸುಸ್ಥಿತಿಯಲ್ಲಿರುವ ಬಸ್‍ಗಳನ್ನು ನಿಯೋಜಿಸಬೇಕು. ಬಸ್‌ ಚಾಲಕರು, ನಿರ್ವಾಹಕರು ಜನರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಖಾಸಗಿ ಬಸ್‍ಗಳಿಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌, ‘ಮಾರ್ಚ್ 23ರ ಮಧ್ಯರಾತ್ರಿಯಿಂದಲೇ 100ರಿಂದ 150 ಮಂದಿ ಗೃಹರಕ್ಷಕದಳ ಹಾಗೂ 200 ಪೊಲೀಸ್‌ ಸಿಬ್ಬಂದಿ ನಿಯೋಜನೆಗೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಸ್.ಟಿ.ಸುನೀಲ್‌ಕುಮಾರ್‌ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT