ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ಮೇವು ವಿತರಣೆ ಮುಂದುವರೆಸುವಂತೆ ರೈತರ ಆಗ್ರಹ

Published 15 ಮೇ 2024, 4:32 IST
Last Updated 15 ಮೇ 2024, 4:32 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದಲ್ಲಿ ರಾಮಕೃಷ್ಣ ಸೇವಾಶ್ರಮದಿಂದ ನಡೆಯುತ್ತಿರುವ ಮೇವು ವಿತರಣೆಯನ್ನು ಸ್ಥಗಿತಗೊಳಿಸಬಾರದು ಎಂದು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಮಂಗಳವಾರ ಒತ್ತಾಯಿಸಿದರು.

ರೈತ ರಾಮಕೃಷ್ಣಪ್ಪ ಮಾತನಾಡಿ, ಜನವರಿಯಿಂದ ನಿತ್ಯ ಸಾವಿರಾರು ಜಾನುವಾರುಗಳಿಗೆ ಸ್ವಾಮಿ ಜಪಾನಂದ ಜಿ ಮೇವು ವಿತರಿಸುತ್ತಿದ್ದಾರೆ. ಬರಗಾಲದಲ್ಲಿಯೂ ಜಾನುವಾರುಗಳನ್ನು ಮಾರಾಟ ಮಾಡದೆ ಹೈನುಗಾರಿಕೆ ನಡೆಸಲು ಅನುಕೂಲವಾಗಿದೆ. ಮೇವು ವಿತರಣೆ ಸ್ಥಗಿತಗೊಳಿಸಿದರೆ ಜಾನುವಾರುಗಳಿಗೆ ಮೇವು ಪೂರೈಸುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

ಪಳವಳ್ಳಿ ರೈತ ಮಹಿಳೆ ಲಕ್ಷ್ಮಮ್ಮ, ತಾಲ್ಲೂಕಿನ ಕೆಲವೆಡೆ ಅಲ್ಪ ಪ್ರಮಾಣದ ಮಳೆಯಾಗಿದೆ. ಇನ್ನೂ ಜಮೀನುಗಳಲ್ಲಿ ಮೇವು ಬೀಳಲು ತಿಂಗಳುಗಳ ಕಾಲಾವಕಾಶ ಬೇಕು. ಏಕಾಏಕಿ ಮೇವು ವಿತರಣೆ ಸ್ಥಗಿತಗೊಳಿಸಿದಲ್ಲಿ ಜಾನುವಾರು ಮಾರಾಟ ಮಾಡಬೇಕಾಗುತ್ತದೆ. ಕನಿಷ್ಠ ಎರಡು ತಿಂಗಳು ಮೇವು ವಿತರಣೆ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟೇಶ್ ಮಾತನಾಡಿ, ಮಳೆ ಆದ ಕೂಡಲೇ ಮೇವು ಸಿಗುವುದಿಲ್ಲ. ತಾಲ್ಲೂಕಿನ ಕೆಲವೆಡೆ ಮಾತ್ರ ಮಳೆಯಾಗಿದೆ. ನಿಡಗಲ್, ಕಸಬಾ, ನಾಗಲಮಡಿಕೆ, ವೈಎನ್ ಹೊಸಕೋಟೆ ಹೋಬಳಿಯ ಬಹುತೇಕ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿಲ್ಲ. ಹೀಗಾಗಿ ಸ್ವಾಮೀಜಿ ಮೇವು ವಿತರಣೆ ಮುಂದುವರೆಸಬೇಕು ಎಂದು ತಿಳಿಸಿದರು.

ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ ಪ್ರತಿಕ್ರಿಯಿಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮೇವು ವಿತರಣೆ ಮುಂದುವರೆಸಲಾಗುವುದು. ಈಗಾಗಲೇ ತಾಲ್ಲೂಕು, ಚಳ್ಳಕೆರೆ ತಾಲ್ಲೂಕು, ಮೊಣಕಾಲ್ಮೂರು, ಪರಶುರಾಂಪುರ, ಕೂಡ್ಲಗಿ ಸೇರಿದಂತೆ ವಿವಿಧೆಡೆಯ 16 ಸಾವಿರ ಜಾನುವಾರುಗಳಿಗೆ ಕಳೆದ 5 ತಿಂಗಳುಗಳಿಂದ 850 ಟನ್ ಮೇವು ವಿತರಿಸಲಾಗಿದೆ. ಉತ್ತಮ ಮಳೆಯಾಗಿ ಮೇವು ಸಿಗುವವರೆಗೂ ಮೇವು ವಿತರಣೆ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರ ರಾಜ್ಯದಾದ್ಯಂತ ಮೇವು ವಿತರಣೆ ಮುಂದುವರೆಸಬೇಕು. ಇನ್ನೂ ಸಾಕಷ್ಟು ಪ್ರದೇಶಗಳಲ್ಲಿ ಮೇವಿನ ಅಭಾವದಿಂದ ಜಾನುವಾರುಗಳನ್ನು ಸಾಕಲಾಗದೆ ರೈತರು ಕಂಗಾಲಾಗಿದ್ದಾರೆ. ಅಂತಹ ರೈತರ ಸಹಾಯಕ್ಕೆ ಸರ್ಕಾರ ಅಗತ್ಯ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT