ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್ ಕಚೇರಿ ಮುಂಭಾಗ ರೈತರ ಪ್ರತಿಭಟನೆ

Published 12 ಮಾರ್ಚ್ 2024, 3:05 IST
Last Updated 12 ಮಾರ್ಚ್ 2024, 3:05 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶೀಘ್ರ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಬೇಕು. ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿದ ರೈತರಿಗೆ ಮಂಜೂರಾತಿ ಪತ್ರ ನೀಡಿ ಖಾತೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಸೋಮವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಇಡೀ ತಾಲ್ಲೂಕಿನಲ್ಲಿ ಬೆರಳೆಣಿಕೆ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯೂ ಇಲ್ಲದ ಕಾರಣ ತುರ್ತು ಸ್ಥಿತಿಯಲ್ಲಿ ವೈದ್ಯಕೀಯ ಸೇವೆ ಸಿಗದೆ ಸಾಕಷ್ಟು ಮಂದಿ ಬಡ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಯ ವೈದ್ಯರು ತುಮಕೂರು, ಬೆಂಗಳೂರಿಗೆ ಹೋಗುವಂತೆ ತಿಳಿಸುವ ಕಾರಣ ರೋಗಿಗಳು ಅರ್ಧ ದಾರಿಯಲ್ಲಿಯೇ ಜೀವ ಕಳೆದುಕೊಳ್ಳುತ್ತಿದ್ದಾರೆ. ವೈದ್ಯರು ಇಲ್ಲವೆಂಬ ಮಾಹಿತಿ ಇದ್ದರೂ ಜಿಲ್ಲೆ, ರಾಜ್ಯ ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ದೂರಿದರು.

ಹಲ ದಶಕಗಳಿಂದ ರೈತರು ಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಜಮೀನುಗಳಲ್ಲಿ ಹಸನು ಮಾಡಿಕೊಂಡು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಸರ್ಕಾರ ಉಳುಮೆ ಮಾಡುತ್ತಿರುವವರ ಹೆಸರಿಗೆ ಖಾತೆ ಮಾಡಿಕೊಡದೆ ಸತಾಯಿಸುತ್ತಿದೆ. ಹೆಚ್ಚುವರಿ 2 ಎಕರೆ ಜಮೀನು ಮಂಜೂರು ಮಾಡುವಂತೆ ಉಪವಿಭಾಗಾಧಿಕಾರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೂಡಲೆ ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಮಂಜೂರಾತಿ ಪತ್ರ ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು, ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ನರಸಪ್ಪ, ಹನುಮಂತರಾಯಪ್ಪ, ಚಿತ್ತಯ್ಯ, ರಾಮಾಂಜಪ್ಪ, ಸದಾಶಿವಪ್ಪ, ಗುಡಪಲ್ಲಪ್ಪ, ನಾರಾಯಣನಾಯ್ಕ, ಲಕ್ಷ್ಮಾನಾಯ್ಕ, ರಾಜಣ್ಣ, ಈರಣ್ಣ, ಚಿತ್ತಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT