ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹ: ಕೆಆರ್‌ಎಸ್‌ನಿಂದ ‘ಹಾಸನ ಚಲೋ’ ನಾಳೆ

Published 12 ಮೇ 2024, 5:19 IST
Last Updated 12 ಮೇ 2024, 5:19 IST
ಅಕ್ಷರ ಗಾತ್ರ

ತುಮಕೂರು: ಹಾಸನದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ, ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮೇ 13ರಂದು ‘ಹಾಸನ ಚಲೋ’ ಹಮ್ಮಿಕೊಂಡಿದೆ.

‘ಅಬಲೆಯರನ್ನು ಗೌರವಿಸೋಣ- ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕೆಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರಕುಮಾರ್‌ ಗೌಡ, ಕಾರ್ಯದರ್ಶಿಯಾದ ವಿ.ಎ.ಆನಂದ್‌, ಪ್ರಭಾಕರ್, ಉಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ್‌ ತಿಳಿಸಿದ್ದಾರೆ.

‘ಸಂಸದ ಪ್ರಜ್ವಲ್‌ ತನ್ನ ಬಳಿಗೆ ಸಹಾಯ ಕೇಳಿಕೊಂಡು ಬಂದ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇಲ್ಲಿ ಹೆಣ್ಣು ಮಕ್ಕಳು ಬಲಿಪಶು ಆಗಿದ್ದು, ಇದರಲ್ಲಿ ಅವರದು ಯಾವುದೇ ತಪ್ಪಿಲ್ಲ. ಇದನ್ನು ನಾಗರಿಕ ಸಮಾಜ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಸಮಾಜದ ಎಲ್ಲರು ಸಂತ್ರಸ್ತರಿಗೆ ಧೈರ್ಯ ತುಂಬಬೇಕು. ಪ್ರಜ್ವಲ್‌ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಅಸಹಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗಿ, ವಿಡಿಯೊ ಮಾಡಿಕೊಂಡು ವಿಕೃತಿ ಮೆರೆದಿದ್ದಾರೆ. ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು. ಪ್ರಜ್ವಲ್‌ ರೇವಣ್ಣ ಕುಟುಂಬದ ಕೃಪಾಕಟಾಕ್ಷದಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು. ಪ್ರಕರಣದ ಸಾಕ್ಷ್ಯ ತಿರುಚುವ, ಸಂತ್ರಸ್ತರಿಗೆ ಬೆದರಿಕೆ ಹಾಕುವುದನ್ನು ತಪ್ಪಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರಕರಣ ದಾಖಲಾದ ನಂತರ ಪ್ರಜ್ವಲ್‌ ಹಾಸನದಿಂದ ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದರೆ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಎಲ್ಲರೂ ಇದರಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನ ಮೂಡುತ್ತದೆ. ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ನ್ಯಾಯಾಂಗದ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜ್ವಲ್‌ ವಿರುದ್ಧ ಕೆಆರ್‌ಎಸ್‌ನಿಂದ ಮೊದಲು ದೂರು ನೀಡಲಾಗಿತ್ತು. ಏ. 27ರಂದು ಕೆಆರ್‌ಎಸ್‌ ರಾಜ್ಯ ಉಪಾಧ್ಯಕ್ಷ ಎಸ್‌.ಎಚ್‌.ಲಿಂಗೇಗೌಡ ಹೊಳೆನರಸೀಪುರ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಂಡಿದ್ದರೆ, ಪ್ರಜ್ವಲ್‌ ತಪ್ಪಿಸಿಕೊಳ್ಳುವುದನ್ನು ತಡೆಯಬಹುದಿತ್ತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT