ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ಗೆ ವಿರೋಧ: 25ಕ್ಕೆ ತುಮಕೂರು ಬಂದ್

Published 18 ಜೂನ್ 2024, 15:28 IST
Last Updated 18 ಜೂನ್ 2024, 15:28 IST
ಅಕ್ಷರ ಗಾತ್ರ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಜೂನ್ 25ರಂದು ಜಿಲ್ಲಾ ಬಂದ್‌ಗೆ ಹೇಮಾವತಿ ನೀರಾವರಿ ಹೋರಾಟ ಸಮಿತಿ ಕರೆ ನೀಡಿದೆ.

ಈಗಾಗಲೇ ನಾಲೆ ಬಳಿ ಹೋರಾಟ ನಡೆಸಿ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮನೆ ಬಳಿ ಪ್ರತಿಭಟನೆ ಮಾಡಿದ ಹೋರಾಟಗಾರರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಅದರ ಮುಂದುವರಿದ ಭಾಗವಾಗಿ ಬಂದ್‌ಗೆ ಕರೆ ಕೊಡಲಾಗಿದೆ ಎಂದು ಸಮಿತಿ ಮುಖಂಡರಾದ ಸೊಗಡು ಶಿವಣ್ಣ, ಎಚ್.ನಿಂಗಪ್ಪ, ಎಸ್.ಡಿ.ದಿಲೀಪ್ ಕುವಾರ್, ಪಂಚಾಕ್ಷರಯ್ಯ, ಧನ್ಯಕುಮಾರ್ ಇತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ವಿವಿಧ ಹಂತಗಳಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದು, ಈಗ ಬಂದ್‌ಗೆ ಕರೆ ಕೊಡಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ತುರ್ತು ಸೇವೆಯನ್ನು ಹೊರತುಪಡಿಸಿ ಶಾಲಾ, ಕಾಲೇಜುಗಳು, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟು ಬಂದ್ ಮಾಡಲಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸದಂತೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ಶ್ರೀರಂಗ ಏತ ನೀರಾವರಿ ಯೋಜನೆಯಲ್ಲಿ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ನಿರ್ಮಾಣ ಮಾಡುತ್ತಿರುವ ಕಾಲುವೆ ಮಾರ್ಗದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳಿಂದ ಸಿವಿಲ್ ಕಾಮಗಾರಿ ಮುಂದುವರಿಸಲು ಅಡಚಣೆಯಾಗಿದೆ. ವಿದ್ಯುತ್ ಮಾರ್ಗ, ಪರಿವರ್ತಕಗಳನ್ನು ಸ್ಥಳಾಂತರಿಸುವ ಕಾಮಗಾರಿಗೆ ಅಂದಾಜು ಪಟ್ಟಿಯನ್ನು ತಯಾರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಭೂಸ್ವಾಧೀನ ಮಾಡಿಕೊಳ್ಳದೆ ರೈತರ ಜಮೀನಿಗೆ ವಿದ್ಯುತ್ ಮಾರ್ಗ ಬದಲಿಸುವ ಪ್ರಕ್ರಿಯೆ ನಡೆದಿದೆ. ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದರೂ ಮತ್ತೊಂದೆಡೆ ಕಾಮಗಾರಿ ಮುಂದುವರಿಸುವ ಪ್ರಕ್ರಿಯೆ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಹೇಮಾವತಿ ನಾಲೆಯನ್ನು ಆಧುನೀಕರಣ ಮಾಡಿದ್ದು, ಈ ನಾಲೆ ಮೂಲಕ ಕುಣಿಗಲ್, ಮಾಗಡಿ ಭಾಗಕ್ಕೆ ನೀರು ತೆಗೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲೆಯ ಜನರ ವಿರೋಧವಿದೆ. ಮಾಗಡಿ ತಾಲ್ಲೂಕಿಗೆ ನೀರು ಹಂಚಿಕೆ ಮಾಡಿಸಿಕೊಂಡು ತೆಗೆದುಕೊಂಡು ಹೋಗಲಿ. ಅದು ಬಿಟ್ಟು ಜಿಲ್ಲೆಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರ ಬಳಿ ಚರ್ಚಿಸಿ ಪರಿಹಾರ ರೂಪಿಸಬಹುದಿತ್ತು. ಈವರೆಗೂ ಅಂತಹ ಪ್ರಯತ್ನ ಮಾಡಲ್ಲ. ಕಾಂಗ್ರೆಸ್ ನಾಯಕರು ಯೋಜನೆಗೆ ವಿರೋಧವಿದೆ ಎಂದು ಹೇಳುತ್ತಾರೆ. ಆದರೆ ದಿಟ್ಟ ನಿಲುವು ತಾಳಿಲ್ಲ. ಈ ವಿಚಾರವನ್ನು ಪ್ರತಿಷ್ಠೆಯನ್ನಾಗಿ ಮಾಡದೆ ನ್ಯಾಯಸಮ್ಮತವಾದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಪ್ರಮುಖರಾದ ಪ್ರಭಾಕರ್, ಕೆ.ಪಿ.ಮಹೇಶ, ರಾಜಣ್ಣ, ಎಸ್.ರಾಮಚಂದ್ರರಾವ್, ರಾ.ವೀರೇಶ್ ಪ್ರಸಾದ್, ಜಿ.ದೇವರಾಜು, ಭದ್ರೇಗೌಡ, ಕೆ.ವಿ.ಬೆಟ್ಟಯ್ಯ, ಬಸವರಾಜು, ಜುಬೇರ ಷಪಿ, ಎನ್.ಅರುಣ್ ಕುಮಾರ್, ಷಬ್ಬೀರ್ ಅಹಮದ್, ಸೋಮಶೇಖರ್, ಚಂದ್ರಕೀರ್ತಿ, ವಾಸುದೇವಶೆಟ್ಟಿ, ಟಿ.ಜಿ.ವೇದಮೂರ್ತಿ, ಗುರುಪ್ರಕಾಶ್ ಬಳ್ಳುಕ್ಕರಾಯ, ತರಕಾರಿ ಮಹೇಶ್, ಕಾಫೀಪುಡಿ ರಾಜಣ್ಣ, ಗೋಕುಲ್ ಮಂಜುನಾಥ್, ಶಶಿಧರ್, ಬಡ್ಡಿಹಳ್ಳಿ ಚಂದ್ರು ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT