ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಪಿಕ್ ಪ್ಯಾಕೇಟ್ ಮಾಡಿ ಮಹಿಳೆಯರಿಗೆ ಹಣ ಕುಮಾರಸ್ವಾಮಿ

ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
Published 17 ಏಪ್ರಿಲ್ 2024, 17:05 IST
Last Updated 17 ಏಪ್ರಿಲ್ 2024, 17:05 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಬುಧವಾರ ಮತಯಾಚಿಸಿದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಡಿ.ಕೆ. ಸಹೋದರ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, 1962ರಲ್ಲಿ ಎಚ್.ಡಿ.ದೇವೆಗೌಡ ಶಾಸಕರಾಗಿದ್ದಾಗ ಹೇಮಾವತಿ ಜಲಾಶಯ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು. ಅವರ ಶ್ರಮದ ಫಲವಾಗಿ ಮತ್ತು ಸ್ಥಳೀಯ ಶಾಸಕರಾದ ಹುಚ್ಚಮಾಸ್ತಿಗೌಡ, ವೈ.ಕೆ. ರಾಮಯ್ಯ ಹೋರಾಟದಿಂದಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿದಿದೆ ಎಂದರು.

2014ರಲ್ಲಿ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ್ದು, ಹತ್ತು ವರ್ಷವಾದರೂ ಯೋಜನೆ ನಿಂತಲ್ಲೇ ನಿಂತಿದೆ. ಸಾರ್ವಜನಿಕರ ತೆರಿಗೆ ಹಣ ₹13 ಸಾವಿರ ಕೋಟಿ ಖರ್ಚಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ₹1.52 ಲಕ್ಷ ಕೋಟಿ ಸಾಲಮಾಡುತ್ತಿದೆ. ಐದು ವರ್ಷಗಳಲ್ಲಿ ₹5 ಲಕ್ಷ ಕೋಟಿ ಸಾಲ ಮಾಡಲಿದೆ. ಪುರುಷರ ಪಿಕ್ ಪ್ಯಾಕೇಟ್ ಮಾಡಿ ಮಹಿಳೆಯರಿಗೆ ಹಣ ನೀಡುತ್ತಿರುವ ಕಾಂಗ್ರೆಸ್ ‘ಪಿಕ್ ಪ್ಯಾಕೇಟ್ ಸರ್ಕಾರ’ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಬರಗಾಲದಿಂದಾಗಿ 38 ಸಾವಿರ ಕುಟುಂಬಗಳ ಬೆಳೆ ನಾಶವಾಗಿದೆ. ಸರ್ಕಾರ ಕೇವಲ ₹2 ಸಾವಿರ ಪರಿಹಾರ ನೀಡಿದೆ. ಬೆಳೆ ಪರಿಹಾರಕ್ಕೆ ₹600 ಕೋಟಿ ನೀಡಬೇಕಾಗಿದ್ದು, ಕೇಂದ್ರ ಸರ್ಕಾರ ಶೇ 75ರಷ್ಟು ಹಣ ನೀಡುತ್ತಿದ್ದು, ರಾಜ್ಯ ಸರ್ಕಾರ ಶೇ 25ರಷ್ಟು ನೀಡಬೇಕಾಗಿದೆ. ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ₹400 ಕೋಟಿ ಜಾಹೀರಾತು ನೀಡಿದೆ ಎಂದು ಆರೋಪಿಸಿದರು.

ಡಿ.ಕೆ.ಸಹೋದರರು ಅಭಿವೃದ್ಧಿ ಮಾಡಿರುವ ಬಗ್ಗೆ ದಾಖಲೆ ನೀಡದೆ ದರ್ಪ ತೋರುತ್ತಿದ್ದಾರೆ. ‘ಕೂಲಿ ಮಾಡದ್ದೇವೆ ಮತ ನೀಡಿ ಎನ್ನುತ್ತಿದ್ದಾರೆ, ಪಾಪದ ಕೊಡ ತುಂಬಿದೆ. ತಿಪ್ಪರಲಾಗ ಹಾಕಿದರೂ ಅವರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗೆಲಲ್ಲು ಸಾಧ್ಯವಿಲ್ಲ’ ಎಂದು ಹೇಳಿದರು.

ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರ ಮತಯಾಚಿಸಿದ ಅವರ ಪತ್ನಿ ಅನಸೂಯ, ‘ಪತಿಗೆ ರಾಜಕಾರಣ ಗೊತ್ತಿಲ್ಲ, ವೈದ್ಯಕೀಯ ಸೇವೆಯಲ್ಲಿ ಸಾಧನೆ ಮಾಡಿದ್ದಾರೆ. ಜನಸೇವೆಗೆ ಬಂದಿದ್ದಾರೆ ಅವರ ಸೇವೆಯನ್ನು ಪರಿಗಣಿಸಿ’ ಎಂದು ಮನವಿ ಮಾಡಿದರು.

ಶಾಸಕ ಡಾ. ಅಶ್ವತ್ಥನಾರಾಯಣ ಮಾತನಾಡಿ, ಮೂರು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಅಭಿವೃದ್ಧಿ ಕಾರ್ಯಗಳಿಗಿಂತಲೂ ಲಾಭದಾಯಕ ಕಾರ್ಯಗಳನ್ನು ಮಾಡಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನವೂ ಸಿಗದ ಕಾಂಗ್ರೆಸ್‌ಗೆ ಮತ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದರು.

ಮಾಜಿ ಸಚಿವ ಡಿ.ನಾಗರಾಜಯ್ಯ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎಚ್.ನಿಂಗಪ್ಪ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಮುಖಂಡರಾದ ಡಾ.ಬಿ.ಎನ್. ರವಿ, ಲೋಕೇಶ್, ಬಿ.ಎನ್.ಜಗದೀಶ್, ಬಿ.ಶಿವಣ್ಣ, ತರಿಕೆರೆ ಪ್ರಕಾಶ್, ಹರೀಶ್, ರಂಗಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT