ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ಇಷ್ಟೊಂದು ಕ್ರೂರ, ಭೀಕರ ಹತ್ಯೆಯನ್ನು ನೋಡಿರಲಿಲ್ಲ– ಇನ್‌ಸ್ಪೆಕ್ಟರ್‌

ಪತ್ನಿ ಕತ್ತು ಕತ್ತರಿಸಿ, ಚರ್ಮ ಸುಲಿದ ಪತಿ: ಕೊಲೆ ಚಿತ್ರಣ ನೋಡಿ ದಂಗಾದ ಪೊಲೀಸ್!
Published 29 ಮೇ 2024, 5:52 IST
Last Updated 29 ಮೇ 2024, 5:52 IST
ಅಕ್ಷರ ಗಾತ್ರ

ಕುಣಿಗಲ್: ಹುಲಿಯೂರುದುರ್ಗದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕತ್ತು ಕತ್ತರಿಸಿ ಕೊಂದ ನಂತರ ಇಡೀ ರಾತ್ರಿ ದೇಹದ ಚರ್ಮ ಸುಲಿದು, ಅಂಗಾಂಗಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ.  

ಪುಷ್ಪಾ (35) ಬರ್ಬರವಾಗಿ ಹತ್ಯೆಯಾದ ಮಹಿಳೆ. ಕೊಲೆ ಆರೋಪದ ಮೇಲೆ ಪತಿ ಶಿವರಾಮನನ್ನು ಪೊಲೀಸರು ಬಂಧಿಸಿದ್ದಾರೆ

ಶಿವಮೊಗ್ಗ ಜಿಲ್ಲೆ ಸಾಗರದ ಪುಷ್ಪ ತಾಲ್ಲೂಕಿನ ಸುಗ್ಗನಹಳ್ಳಿಯ ಶಿವರಾಮನನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದೂ ಅಂತರ್ಜಾತಿ ವಿವಾಹ. ದಂಪತಿಗೆ ಎಂಟು ವರ್ಷದ ಗಂಡು ಮಗುವಿದೆ. 

ಸಾಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವರಾಮ ಹುಲಿಯೂರುದುರ್ಗದ ಹೊಸಪೇಟೆ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. 

‘ದಂಪತಿ ನಡುವೆ ಸೋಮವಾರ ರಾತ್ರಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಸಿಟ್ಟಿಗೆದ್ದ ಶಿವರಾಮ ಮಚ್ಚಿನಿಂದ ಪತ್ನಿಯ ಕತ್ತು ಕತ್ತರಿಸಿದ್ದಾನೆ. ರುಂಡವನ್ನು ಪಕ್ಕದಲ್ಲಿ ಇಟ್ಟುಕೊಂಡು ಚಾಕುವಿನಿಂದ ಇಡೀ ದೇಹದ ಚರ್ಮ ಸುಲಿದಿದ್ದಾನೆ. ಚಾಕುವಿನಿಂದ ಎದೆ, ಗುಪ್ತಾಂಗಗಳನ್ನು ಬಗೆದು ಹಾಕಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ಅಂಗಾಂಗಗಳನ್ನು ತುಂಡು, ತುಂಡಾಗಿ ಕತ್ತರಿಸಿ ಹಾಕಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪುಟ್ಟ ಕೋಣೆ ತುಂಬಾ ರಕ್ತ ಹರಡಿತ್ತು. ಒಂದು ಕಡೆ ರುಂಡ ಮತ್ತು ಮತ್ತೊಂದು ಕಡೆ ವಿಕಾರವಾಗಿ ತುಂಡು, ತುಂಡಾಗಿ ಕತ್ತರಿಸಿ ಹಾಕಿದ್ದ ದೇಹ ಇತ್ತು. ಕರಳು ಹಾಗೂ ಇತರ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪಕ್ಕದಲ್ಲಿಯೇ ಎಂಟು ವರ್ಷದ ಮಗು ಮಲಗಿತ್ತು. ಆರೋಪಿ ಇಡೀ ರಾತ್ರಿ ಶವದ ಜೊತೆಯಲ್ಲಿಯೇ ಕಳೆದಿದ್ದಾನೆ.  

ಮಂಗಳವಾರ ಬೆಳಗಿನ ಜಾವ ಶಿವರಾಮ ತಾನು ಕೆಲಸ ಮಾಡುತ್ತಿದ್ದ ಸಾಮಿಲ್ ಮಾಲೀಕರ ಮಗ ಪ್ರದೀಪ್‌ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಪ್ರದೀಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬೆಳಗಿನ ಜಾವ ಮನೆಗೆ ಹೋದ ಪೊಲೀಸರು ಸ್ಥಳದಲ್ಲಿ ವಿಕಾರವಾಗಿ ಬಿದ್ದಿದ್ದ ಶವವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಏನೂ ನಡೆದಿಲ್ಲ ಎಂಬಂತೆ ಮನೆಯಲ್ಲಿಯೇ ಸಹಜವಾಗಿ ಕುಳಿತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪಟ್ಟಣದಲ್ಲಿಯೇ ಇರುವ ಪುಷ್ಪಾ ಸಂಬಂಧಿ ಶಿವಶಂಕರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ತಂದೆಯೊಂದಿಗೆ ಮಗುವನ್ನೂ ಠಾಣೆಗೆ ಕರೆದೊಯ್ದು ಪೊಲೀಸರು ನಂತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ‘ನನ್ನನ್ನು ನಾಳೆ ಹಾಸ್ಟೆಲ್‌ಗೆ ಸೇರಿಸುವುದಾಗಿ ಅಮ್ಮ ಹೇಳಿದ್ದಳು’ ಎಂದು ಮಗು ಹೇಳಿದೆ. 

‘ನನ್ನ 25 ವರ್ಷದ ಸೇವೆಯಲ್ಲಿ ಇಷ್ಟೊಂದು ಕ್ರೂರ ಮತ್ತು ಭೀಕರ ಹತ್ಯೆ ಯನ್ನು ನಾನು ನೋಡಿರಲಿಲ್ಲ’ ಎಂದು ಅಮೃತೂರು ಠಾಣೆಯ ಇನ್‌ಸ್ಪೆಕ್ಟರ್‌ ಮಾದ್ಯಾ ನಾಯಕ್ ಹೇಳಿದ್ದಾರೆ.

‘ನನ್ನ ಹೆಂಡತಿ ಮನೆಯಲ್ಲಿ ಸರಿಯಾಗಿ ಅಡುಗೆ ಮಾಡುತ್ತಿರಲಿಲ್ಲ. ಮೊಬೈಲ್‌ನಲ್ಲಿ ಸದಾ ಯಾರದೋ ಜೊತೆ ಮಾತನಾಡುತ್ತಿದ್ದಳು. ರಾತ್ರಿ ಮನೆಗೆ ಬಂದಾಗ ಅಡುಗೆ ಮಾಡಿರಲಿಲ್ಲ. ಮಧ್ಯಾಹ್ನ ಉಳಿದ ಅಡುಗೆಯನ್ನು ತಿನ್ನುವಂತೆ ಹೇಳಿದಳು. ಇದರಿಂದ ಜಗಳ ಶುರುವಾಯ್ತು‘ ಎಂದು ಆರೋಪಿ ಹೇಳಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT