ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ರಂಗಭೂಮಿ ಅಳವಡಿಕೆಗೆ ಬಲವಂತ ಹೇರಿ’

‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸಿದ ರಂಗಕರ್ಮಿ ಪ್ರಸನ್ನ
Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶೈಕ್ಷಣಿಕ ರಂಗಭೂಮಿ ಆಗಬೇಕೆಂದು ನಾವೆಲ್ಲರೂ ನೈತಿಕ ಬಲವಂತ ಹೇರಬೇಕು’ ಎಂದು ರಂಗಕರ್ಮಿ ಪ್ರಸನ್ನ ಕರೆ ನೀಡಿದರು.

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ಪ್ರಶಸ್ತಿ ₹ 50,000 ನಗದು ಪುರಸ್ಕಾರ ಒಳಗೊಂಡಿದೆ.

‘ಕನ್ನಡ ರಂಗಭೂಮಿ ಬೆಳೆದಿದೆ, ವಿಕಾಸ ಹೊಂದಿದೆ ಎಂದು ಎಷ್ಟೇ ಹೇಳಿದರೂ ಪ್ರೇಕ್ಷಕರ ಕೊರತೆ ನೀಗಿಸಿಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ. ರಾಕ್ಷಸಾಕಾರವಾಗಿ ಬೆಳೆದಿರುವ ಮನರಂಜನೆ ಎಂಬ ಕಾರ್ಖಾನೆಯ ಪದಾರ್ಥಕ್ಕೆ (ಟಿ.ವಿ. ಮಾಧ್ಯಮ) ಸಿಗುವಷ್ಟು ಪ್ರೇಕ್ಷಕರ ವರ್ಗ ರಂಗಭೂಮಿಗೆ ದೊರೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮನೆಯಲ್ಲಿಯೇ ಎಲ್ಲಾ ರೀತಿಯ ಮನರಂಜನೆ ದೊರೆಯುತ್ತಿರುವುದರಿಂದ ನಾಟಕವೆಂಬ ಜೀವಂತ ಪ್ರಕ್ರಿಯೆಯನ್ನು ನೋಡಲು ಜನ ಆಸಕ್ತಿ ತೋರುವುದಿಲ್ಲ. ಶಾಲೆಗಳಲ್ಲಿ ರಂಗಶಿಕ್ಷಣ ಅಳವಡಿಸುವುದೇ ಇದಕ್ಕೆ ಪರಿಹಾರ. ಇದನ್ನು ಸಾಧಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಇದಕ್ಕಾಗಿ ಚಳವಳಿ ಅಗತ್ಯವಿದ್ದರೆ, ಅದನ್ನು ಮಾಡಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿದರು.

‘ಮೊರಾರ್ಜಿ ದೇಸಾಯಿ, ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ರಂಗಶಿಕ್ಷಣ ಪ್ರಾರಂಭಿಸಿ ಎಂದು ಸಚಿವ ಆಂಜನೇಯ ಅವರಿಗೆ ಮನವಿ ಮಾಡಿದ್ದೇವೆ. ಅವರೂ ‘ಹೂಂ’ ಗುಟ್ಟಿದ್ದಾರೆ. ಆದರೆ, ಇಷ್ಟೇ ಒತ್ತಡ ಸಾಲದು’ ಎಂದು ಅಭಿಪ್ರಾಯಪಟ್ಟರು.

ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌, ‘ವಸತಿಶಾಲೆಗಳಿಗೆ ಸಂಗೀತದ ಶಿಕ್ಷಕರನ್ನು ನೇಮಿಸಿಕೊಂಡ ಹಾಗೆ ರಂಗಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದು ಅಕಾಡೆಮಿ ವತಿಯಿಂದ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆ ಪ್ರಸ್ತಾವನೆ ಎಲ್ಲಿದೆ ಎನ್ನುವುದು ಇನ್ನೂ ಹುಡುಕುತ್ತಲ್ಲೇ ಇದ್ದೇವೆ’ ಎಂದು ವ್ಯಂಗ್ಯವಾಡಿದರು.

ನಿರ್ದೇಶಕ ಎಂ.ಎಸ್‌.ಸತ್ಯು, ‘ಸರ್ಕಾರದಿಂದ ಅವಕಾಶ ಕೇಳುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕರಿಂದ ಅವಕಾಶ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ. ಆಗ ರಂಗಭೂಮಿ ಉಳಿಯುತ್ತದೆ’ ಎಂದು ರಂಗಕರ್ಮಿಗಳಿಗೆ ಕಿವಿಮಾತು ಹೇಳಿದರು.

ನಾಟಕ ರಚನಾ ಸ್ಪರ್ಧೆಯ ಸಾಮಾನ್ಯ ವಿಭಾಗದಲ್ಲಿ ವಿಜೇತರಾದ ಕಾವ್ಯಾ ಕಡಮೆ ನಾಗರಕಟ್ಟೆ, ಬಿ.ಎಂ.ಗಿರಿರಾಜ, ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ವಿಜೇತರಾದ ಕೆ.ಎ. ಓಬಳಪ್ಪ, ಎಚ್‌.ಎಂ. ಪ್ರಮೀಳಾ ಅವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT