ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಮಹನೀಯರ ಆದರ್ಶಕ್ಕೆ ಸಿಗದ ಗೌರವ: ಬಿ.ಆರ್‌.ರವಿಕಾಂತೇಗೌಡ

ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಐಜಿಪಿ ಬಿ.ಆರ್‌.ರವಿಕಾಂತೇಗೌಡ
Published 1 ಫೆಬ್ರುವರಿ 2024, 6:31 IST
Last Updated 1 ಫೆಬ್ರುವರಿ 2024, 6:31 IST
ಅಕ್ಷರ ಗಾತ್ರ

ತುಮಕೂರು: ಮಹನೀಯರ ವಿಗ್ರಹ ಪ್ರತಿಷ್ಠಾಪಿಸಿ ಗೌರವ ಸಲ್ಲಿಸುತ್ತೇವೆ. ಆದರೆ ಅವರು ಸಾರಿದ ತತ್ವಾದರ್ಶಗಳಿಗೆ ವಿರುದ್ಧವಾಗಿ ಅಂತಹವರ ಪುತ್ಥಳಿ ಮುಂದೆಯೇ ಅನ್ಯಾಯ, ಕಪಟ, ವಂಚನೆ ಮಾಡುತ್ತಿದ್ದೇವೆ ಎಂದು ಕೇಂದ್ರ ವಲಯ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಬೇಸರದ ಮಾತುಗಳನ್ನಾಡಿದರು.

ವಿಶ್ವವಿದ್ಯಾಲಯಲ್ಲಿ ಬುಧವಾರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮ ಪಾಲನ ಘಟಕ, ಕೌಶಲಾಭಿವೃದ್ಧಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧ್ಯಾತ್ಮಿಕತೆ ಬಿತ್ತಿದ, ಸರ್ವಧರ್ಮ ಸಮನ್ವಯದ ತತ್ವ ಸಾರಿದ ಕುವೆಂಪು ಅವರ ಆದರ್ಶಗಳನ್ನು ಪಾಲಿಸಿದರೆ ಧರ್ಮಗಳಲ್ಲಿರುವ ಪೂರ್ವಗ್ರಹ ತೊಲಗಿಸಬಹುದು. ವಿದ್ಯಾರ್ಥಿಗಳು ಸಮಾಜವನ್ನು ಒಗ್ಗೂಡಿಸುವುದಕ್ಕೆ ಶ್ರಮಿಸಬೇಕು. ನಮ್ಮನ್ನು ವಿಂಗಡಿಸುವ ನಕಾರಾತ್ಮಕ ಶಕ್ತಿಗಳನ್ನು ಅಡಗಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿವೇಕವನ್ನು ಬೋಧಿಸಲು ಅಂತರ್ಜಾಲದಿಂದ ಸಾಧ್ಯವಿಲ್ಲ. ಅಂತರ್ಜಾಲ ಮಾಹಿತಿ ನೀಡಬಹುದಷ್ಟೇ. ಯಂತ್ರಗಳನ್ನು ಉಪಯೋಗಿಸುವುದರಿಂದ ಯಾರೂ ಆಧುನಿಕರಾಗುವುದಿಲ್ಲ. ವೈಚಾರಿಕತೆಯ ಮನೋಭಾವದಿಂದ ಆಧುನಿಕತೆಯನ್ನು ಸ್ವಾಗತಿಸಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಚಿಂತನಾಶೀಲರಾಗಬೇಕು. ಎಲ್ಲ ಧರ್ಮಗಳಲ್ಲಿರುವ ತತ್ವಗಳು ಒಂದೇ ಎಂಬುದನ್ನು ಅರಿಯಬೇಕು. ಗುಂಪುಗಾರಿಕೆ, ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆಯನ್ನು ವಿರೋಧಿಸುವ ವ್ಯಕ್ತಿತ್ವ ನಿರ್ಮಾಣವಾಗಬೇಕು ಎಂದು ಹೇಳಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ, ‘ಪದವಿಗಳು ವ್ಯಕ್ತಿತ್ವ ರೂಪಿಸುವುದಿಲ್ಲ. ಇಚ್ಛಾಶಕ್ತಿಯ ಕೊರತೆಯಿದ್ದಲ್ಲಿ ದೇಶ ನಿರ್ಮಾಣ ಸಾಧ್ಯವಿಲ್ಲ. ಇಚ್ಛಾಶಕ್ತಿ ರೂಪಿಸುವುದು ಶಿಕ್ಷಣದ ಭಾಗವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಜಿ.ಬಸವರಾಜ, ಐಕ್ಯೂಎಸಿ ಮಂಡಳಿಯ ನಿರ್ದೇಶಕ ಪ್ರೊ.ಬಿ.ರಮೇಶ್‌, ಪಿಎಂಇಬಿ ಮಂಡಳಿ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ ಕುಮಾರ್, ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ.ಕೆ.ಜಿ.ಪರಶುರಾಮ, ಸಹಾಯಕ ಪ್ರಾಧ್ಯಾಪಕ ಎ.ರೂಪೇಶ್‌ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT