ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ನಿವಾರಣೆಗೆ ಸಂಗೀತ ಅಗತ್ಯ

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಗಾಯನ ಶಿಬಿರದಲ್ಲಿ ಟಿ.ಎ.ವೀರಭದ್ರಯ್ಯ ಅಭಿಪ್ರಾಯ
Last Updated 2 ಜೂನ್ 2019, 20:09 IST
ಅಕ್ಷರ ಗಾತ್ರ

ತುಮಕೂರು: ಕೆಲಸದ ಒತ್ತಡ ನಿವಾರಣೆ ಮಾಡಿ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದರು.

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಶ್ರೂಷಕ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗಾಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಂಗೀತಕ್ಕೆ ನೋವು ನಿವಾರಿಸುವ ಶಕ್ತಿ ಇದೆ ಎಂಬುದನ್ನು ಒಬ್ಬ ಅರಿವಳಿಕೆ ತಜ್ಞನಾಗಿ ಕಂಡುಕೊಂಡಿದ್ದೇನೆ. ಸಂಗೀತಕ್ಕೆ ನೋವನ್ನು ಮರೆಸುವ ಮಾಂತ್ರಿಕ ಶಕ್ತಿ ಇದೆ ಎಂಬುದನ್ನು ಹಲವು ಸಾಕ್ಷ್ಯಗಳ ಮೂಲಕ ನಿರೂಪಿಸಿವೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೂ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ರೋಗಿಗಳ ಸೇವೆಯಲ್ಲಿ ತಮ್ಮ ನೆಮ್ಮದಿ ಕಳೆದುಕೊಳ್ಳುವ ಶುಶ್ರೂಷ ವಿದ್ಯಾರ್ಥಿಗಳಿಗೆ ಮನರಂಜನೆ ಅಗತ್ಯವಿದೆ ಎಂಬುದನ್ನು ಮನಗಂಡು, ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾಸಂಸ್ಥೆ ಆಯೋಜಿಸಿರುವ ಈ ಗಾಯನ ಶಿಬಿರ ತುಂಬಾ ಒಳ್ಳೆಯದು ಎಂದು ಹೇಳಿದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿವೃತ್ತ ಉಪ ಪ್ರಾಂಶುಪಾಲರಾದ ಕೆ.ಎಸ್.ಉಮಾಮಹೇಶ್ ಮಾತನಾಡಿ, ‘ದೇವರನ್ನು ಒಲಿಸಿಕೊಳ್ಳುವ ಶಕ್ತಿ ಸಂಗೀತ ಮತ್ತು ನೃತ್ಯದಂತಹ ಮಾಧ್ಯಮಗಳಿಗಿದೆ. ಹರಿದಾಸ ಪರಂಪರೆ, ವಚನ ಪರಂಪರೆಯಂತಹ ಅನೇಕ ಸಂಗೀತ ಪರಂಪರೆಗಳು ನಮ್ಮ ಶ್ರೇಷ್ಠತೆಯ ಪ್ರತಿಬಿಂಬವಾಗಿವೆ’ ಎಂದರು.

ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ‘ಕಳೆದ 15 ವರ್ಷಗಳಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಉತ್ಕೃಷ್ಟ ಚಿಕಿತ್ಸೆ, ನುರಿತ ತಜ್ಞ ವೈದ್ಯರಿಂದ ನಡೆಯುತ್ತಿರುವ ರೋಗಿಗಳ ಸೇವಾ ಕಾರ್ಯಕ್ಕೆ ರಾಜ್ಯದಲ್ಲಿ ಜಿಲ್ಲಾಸ್ಪತ್ರೆಗೆ ಎರಡು ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ’ ಎಂದರು.

ಜಿಲ್ಲಾ ಆಸ್ಪತ್ರೆ ಹಿರಿಯ ನೇತ್ರತಜ್ಞ ಡಾ.ದಿನೇಶ್‌ಕುಮಾರ್, ಜಿಲ್ಲಾಸ್ಪತ್ರೆ ಹಿರಿಯ ನೇತ್ರ ಚಿಕಿತ್ಸಾ ತಜ್ಞ ಡಾ.ಕೆ.ಆರ್.ಮಂಜುನಾಥ್ ಮಾತನಾಡಿದರು.

ಗಾಯನ ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 200ಕ್ಕೂ ಹೆಚ್ಚು ಶುಶ್ರೂಷಕ ವಿದ್ಯಾರ್ಥಿಗಳಿಗೆ ಲಕ್ಷ್ಮೀ ಪ್ರಸಾದ್ ಮತ್ತು ಮಲ್ಲಿಕಾರ್ಜುನ ಕೆಂಕೆರೆ ಹಾಗೂ ಅರುಣ್‌ಕುಮಾರ್ ತಂಡದವರು ನಾಡಗೀತೆ, ವಚನ ಗಾಯನ, ಭಕ್ತಿಗೀತೆ, ಭಾವಗೀತೆ, ದಾಸರಪದಗಳು, ತತ್ವಪದಗಳ ಗಾಯನ ತರಬೇತಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಶುಶ್ರೂಷ ಶಾಲೆ ಪ್ರಾಂಶುಪಾಲ ಜಯಲಕ್ಷ್ಮಿ, ಜಿಲ್ಲಾ ಆಸ್ಪತ್ರೆ ಅರೆವೈದ್ಯಕೀಯ ಶಿಕ್ಷಣ ಕೋರ್ಸ್ ಸಂಯೋಜಕ ಚಿಕ್ಕಹನುಮಂತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT