ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಹೊಸ ಪ್ರಭೇದದ ಸಸ್ಯ ಪತ್ತೆ

Last Updated 3 ಜುಲೈ 2021, 2:16 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ದೇವರಾಯನದುರ್ಗ ಸಂರಕ್ಷಿತ ಅರಣ್ಯದಲ್ಲಿ ಹೊಸ ಪ್ರಭೇದದ ಸಸ್ಯ ಪತ್ತೆಯಾಗಿದೆ

ಇಳಿಜಾರಿನ ಒಣ ನೆಲದಲ್ಲಿ ಬೆಳೆಯುವ ಈ ಸಸ್ಯಕ್ಕೆ ಜಿಲ್ಲೆಯ ಸ್ಮರಣಾರ್ಥ ‘ಬ್ರಾಕಿಸ್ಟೆಲ್ಮಾ ತುಮಕೂರೆನ್ಸ್’ ಎಂದು ನಾಮಕರಣ ಮಾಡಲಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.

ಸಸ್ಯ ಶಾಸ್ತ್ರಜ್ಞರಾದ ಎ.ಎನ್.ಶೃಂಗೇಶ್‍,ಡಾ.ಎಂ.ಸಂಜಪ್ಪ, ಸಹನಾ, ಪಿ.ವೇಣು ಇತರ ತಜ್ಞರು ಅಧ್ಯಯನ ನಡೆಸಿ ಖಚಿತಪಡಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದೇವರಾಯನದುರ್ಗ ಒಣ ಎಲೆ ಉದುರುವ ಕಾಡಿನಲ್ಲಿ ಸಸ್ಯ ಅಧ್ಯಯನದ ಸಂದರ್ಭದಲ್ಲಿ ಪತ್ತೆ ಹಚ್ಚಲಾಯಿತು. ಬಾದೆ ಹುಲ್ಲಿನ ಮಧ್ಯೆ ಬೆಳೆಯುವ ಹುಲ್ಲಿನಂತಹ ಸಣ್ಣ ಸಸ್ಯವಾಗಿದ್ದು, ಸುಮಾರು ಒಂದು ಮೀಟರ್ ಉದ್ದ ಬೆಳೆಯುತ್ತದೆ. ಕಾಂಡವು ದುಂಡಾಗಿದ್ದು ದುರ್ಬಲವಾಗಿರುತ್ತದೆ. ನೇರ ಬೆಳೆಯುತ್ತದೆ. ಕೆಲವೊಮ್ಮೆ ಕವಲೊಡೆಯುತ್ತದೆ. ಎಲೆಗಳು ಮೊನಚಾಗಿದ್ದು ಜೋತಾಡುತ್ತವೆ. ಮಾರ್ಪಾಡಾದ ಬೇರುಗೆಡ್ಡೆಯ ರೂಪದಲ್ಲಿ ಭೂಮಿಯೊಳಗಿದ್ದು, ಜೂನ್– ಜುಲೈ ತಿಂಗಳ ಮುಂಗಾರಿನ ಮಳೆ ಬಿದ್ದಾಗ ಚಿಗುರೊಡೆದು ಹೂ ಬಿಡುತ್ತದೆ. ಹೂ ಮತ್ತು ಎಲೆಗಳ ಬಾರಕ್ಕೆ ಕಾಂಡ ಬಾಗುತ್ತದೆ. ಆಗಸ್ಟ್– ಸೆಪ್ಟೆಂಬರ್‌ನಲ್ಲಿ ಕಾಯಿ ಬಿಡುತ್ತದೆ. ಕಾಯಿಗಳು ಎತ್ತಿನ ಕೊಂಬಿನ ರೂಪದಲ್ಲಿರುತ್ತವೆ ಎಂದು ವಿವರಿಸಿದ್ದಾರೆ.

ಇದರ ಎಲೆ, ಕಾಂಡವನ್ನು ಮೊಲ,ಬೇರನ್ನು ಮುಂಗುಸಿ, ಇಲಿ, ಹಂದಿಗಳು ತಿನ್ನುತ್ತವೆ. ಹೂ ಬಿಟ್ಟಾಗ ಚಿಟ್ಟೆಗಳು, ಜೇಡ, ಇರುವೆಗಳು ಆಕರ್ಷಿತವಾಗುತ್ತವೆ ಎಂದಿದ್ದಾರೆ.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಇದು ಬದುಕುಳಿದಿದೆ. ಇಂತಹ ಸಾವಿರಾರು ಪ್ರಭೇದದ ಸಸ್ಯಗಳು ಜಿಲ್ಲೆಯ ಬೇರೆ ಬೇರೆ ಕಾಡುಗಳಲ್ಲಿ ಕಂಡು ಬರುತ್ತಿವೆ. ಇವುಗಳ ಸಂರಕ್ಷಣೆ ಆಗಬೇಕಾದರೆ ಬೆಟ್ಟ, ಗುಡ್ಡಗಳಿಗೆ ಬೆಂಕಿ ಹಾಕುವುದನ್ನು ತಪ್ಪಿಸಬೇಕು. ಬೆಟ್ಟಗಳಲ್ಲಿ ಕಲ್ಲು ಗಣಿಗಾರಿಕೆ ನಿಯಂತ್ರಿಸಬೇಕು. ಮೋಜಿಗಾಗಿ ಅರಣ್ಯದೊಳಗೆ ಅನಧಿಕೃತ ಪ್ರವೇಶ ನಿರ್ಬಂಧಿಸಲು ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಬಿ.ವಿ.ಗುಂಡಪ್ಪ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT