ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿಗೋಷ್ಠಿ | 'ಮೇಲು, ಕೀಳೆಂಬ ಕೀಳರಿಮೆ‌ ಸುಡುವ ಬನ್ನಿ'

ಮಡಿ-ಮೈಲಿಗೆಯ ಕಿತ್ತು ಹೊರ ಬನ್ನಿ
Published 30 ಡಿಸೆಂಬರ್ 2023, 7:58 IST
Last Updated 30 ಡಿಸೆಂಬರ್ 2023, 7:58 IST
ಅಕ್ಷರ ಗಾತ್ರ

ತುಮಕೂರು: ‘ಗುಡಿ, ಗೋಪುರವ ತೊರೆದು ಬನ್ನಿ, ಮಡಿ-ಮೈಲಿಗೆಯ ಕಿತ್ತು ಹೊರ ಬನ್ನಿ. ಜಾತಿ ಧರ್ಮಗಳ ಬುಡ ಮೇಲು ಮಾಡ ಬನ್ನಿ. ಮೇಲು ಕೀಳು ಎಂಬ ಕೀಳರಿಮೆ‌ ಸುಡುವ ಬನ್ನಿ’ ಎಂಬ ಕವಿತೆ ಪ್ರಸ್ತುತ ಪಡಿಸುವ ಮೂಲಕ ಕವಿ ಎಚ್.ಎಂ.ನಾಗರಾಜು ಸಮಾನತೆಯ ಆಶಯ ಬಿತ್ತಿದರು.

ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ‘ಮಾನವೀಯತೆಯ ಮೆರೆಸೋಣ ಬನ್ನಿ’ ಎಂಬ ಶೀರ್ಷಿಕೆಯ ಕವಿತೆ ವಾಚಿಸಿದರು.

‘ಆಸ್ತಿ, ಅಂತಸ್ತುಗಳ ಬಿಟ್ಟು ಹೊರ ಬನ್ನಿ. ಸಮಾನತೆಯ ತತ್ವ ಸಾರಿ ಹೇಳುವ ಬನ್ನಿ. ಅಂಧಕಾರವ ಮಣಿಸಿ, ಜ್ಞಾನ ಜ್ಯೋತಿಯ ಬೆಳಗುವ ಬನ್ನಿ. ಹಿಂಸೆಯನ್ನು ಅಹಿಂಸೆಯಿಂದ ಸುಡುವ ಬನ್ನಿ, ಸೌಹಾರ್ದತೆ ಸಾರಿ ತಿಳಿ ಹೇಳುವ ಬನ್ನಿ’ ಎನ್ನುವ ಸಾಲುಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರು.

ಕವಿ ಎಚ್‌.ಸಿ.ಗಂಗಾಧರಯ್ಯ, ‘ಚಿಗುರುವ ಮುಂಚೆ ಚಿವುಟಿದರು. ಭೂಮಿಗೆ ಬರುವ ಮೊದಲೇ ಬಲಿ ಕೊಟ್ಟರು. ಹೆತ್ತವರೇ ಕಸದ ತೊಟ್ಟಿಯಲ್ಲಿ ಬಿಸಾಕಿದರು. ಹೆಣ್ಣೆಂದರೆ ತಾತ್ಸಾರವೇಕೆ? ಹೆಣ್ಣಿಗೆ ಬದುಕುವ ಹಕ್ಕಿಲ್ಲವೇ’ ಎಂದು ಪ್ರಶ್ನಿಸುತ್ತಾ ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಕವಯತ್ರಿ ಆಶಾರಾಣಿ ಬಗ್ಗನಡು, ‘ಮುಸಲ್ಮಾನರೇ ಇಲ್ಲದಿರುವ ಊರಲ್ಲಿ ‘ಪೀರಲಬ್ಬ’ (ಮೊಹರಂ) ನಡೆಯುತ್ತದೆ. ರಾಜ್ಯದಲ್ಲಿ ಮುಸ್ಲಿಮರು ಗಣೇಶ ಹಬ್ಬ ಮಾಡುತ್ತಾರೆ. ಇಂತಹ ಸಾಮರಸ್ಯ ಮರೆಸಿ, ಸಂಘರ್ಷವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಹೆಣ್ಣು ತೊಡುವ ಉಡುಗೆಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲಲಿ’ ಎಂದು ತಮ್ಮ ಕವಿತೆಯ ಮೂಲಕ ಒತ್ತಾಯಿಸಿದರು.

ಲೇಖಕ ಎಚ್.ಎಸ್.ಸತ್ಯನಾರಾಯಣ ಕವಿಗೋಷ್ಠಿ ಉದ್ಘಾಟಿಸಿದರು. ಕವಯತ್ರಿ ಲಲಿತಾ ಸಿದ್ದಬಸವಯ್ಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಪೂರ್ಣಿಮಾಬಾಬು, ಕಿರಣ್‌ ನಿಶಾನಿ, ಸಿ.ಆರ್‌.ಶೈಲಜಾ, ವಿಶ್ವನಾಥ್‌ ಮದ್ದಿಬಂಡೆ, ಲಕ್ಷ್ಮಯ್ಯ, ವಿನಯ್‌ಕುಮಾರ್‌, ಲತಾ ರಾಜಕುಮಾರ್‌, ಶಂಕರಪ್ಪ ಬಳ್ಳಕಟ್ಟೆ, ನಿಡಸಾಲೆ ಪ್ರಸಾದ್‌, ಉಮಾದೇವಿ ಗ್ಯಾರಳ್ಳ, ರೇಣುಕಾರಾಧ್ಯ, ಜಿ.ಎಸ್‌.ಸಿಂಧು, ಕಮಲಾ ರಾಜೇಶ್‌, ವಾಣಿ ಸತೀಶ್‌, ಸ.ರಮೇಶ್‌, ಹನುಮಂತರಾಯಪ್ಪ, ಮಹಬೂಬ್‌ ಖಾನ್‌, ಅರುಣಕುಮಾರ್‌ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT