ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ. ಸೋಮಣ್ಣ ಅವರಿಗೆ ರಾಜಕೀಯದಲ್ಲಿ ಮುಂದೆ ಉಜ್ವಲ ಭವಿಷ್ಯವಿದೆ: ಪರಮೇಶ್ವರ

ಕಾಂಗ್ರೆಸ್‌ಗೆ ಬರುವಂತೆ ಪರೋಕ್ಷ ಆಹ್ವಾನ ನೀಡಿದ ನಾಯಕರು
Published 7 ಡಿಸೆಂಬರ್ 2023, 2:58 IST
Last Updated 7 ಡಿಸೆಂಬರ್ 2023, 2:58 IST
ಅಕ್ಷರ ಗಾತ್ರ

ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ರಾಜಕೀಯದಲ್ಲಿ ಮುಂದೆ ಉಜ್ವಲ ಭವಿಷ್ಯವಿದೆ. ಈಗಲೇ ನಿರಾಶರಾಗುವ ಅಗತ್ಯವಿಲ್ಲ. ಆದರೆ ಅದಕ್ಕೆ ಮನಸ್ಸು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಸೋಮಣ್ಣ ಪ್ರತಿಷ್ಠಾನದಿಂದ ನಿರ್ಮಾಣ ಮಾಡಿರುವ ಗುರುಭವನವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ಮಠದಲ್ಲಿ ನಡೆದ ಕಾರ್ಯಕ್ರಮ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುವ ವೇದಿಕೆಯಾಗಿ ಮಾರ್ಪಟ್ಟಿತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣ ಸೋಲಿನ ವಿಚಾರ ಪ್ರಸ್ತಾಪಿಸಿದ ಸಚಿವರು, ‘ಸೋಲು– ಗೆಲುವು ಇರುತ್ತದೆ. ಅದಕ್ಕಾಗಿ ನಿರಾಶೆಪಡುವ ಅಗತ್ಯವಿಲ್ಲ. ಮುಂದಿನ ರಾಜಕಾರಣದಲ್ಲಿ ಉಜ್ವಲ ಭವಿಷ್ಯ ಕಾಣುತ್ತಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಆಹ್ವಾನ ನೀಡಿದರು.

ಹಿಂದೆ ಸೋಮಣ್ಣ ಕಾಂಗ್ರೆಸ್‌ನಲ್ಲೇ ಇದ್ದರು. ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಸೋಮಣ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಇದಾದ ಒಂದು ವಾರದಲ್ಲೇ ಬಿಜೆಪಿ ಸೇರಿಕೊಂಡಿದ್ದರು. ಹೀಗೇಕೆ ಮಾಡಿದ್ದೀರಿ? ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದೆವು ಎಂದೆ. ಅದಕ್ಕೆ ಜಿ.ಎಸ್.ಬಸವರಾಜು ಕರೆದುಕೊಂಡು ಹೋದರು ಎಂದು ಹೇಳಿದರು. ಆ ಪಕ್ಷದಲ್ಲೂ ಸಚಿವರಾಗಿದ್ದು, ಈಗ ಸೋತಿದ್ದಾರೆ. ರಾಜಕಾರಣದಲ್ಲಿ ಭಯಪಡುವ ಅಗತ್ಯವಿಲ್ಲ. ಮತ್ತೆ ಮುಂದೆ ಬರುತ್ತಾರೆ ಎಂದು ಹೇಳುವ ಮೂಲಕ ‘ರಾಜಕೀಯ ಭವಿಷ್ಯ’ದ ಮಾತುಗಳನ್ನಾಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಸೋಮಣ್ಣ ತಮ್ಮ ಕ್ಷೇಮ ನೋಡಿಕೊಳ್ಳುವುದು ಬಿಟ್ಟು, ಮತ್ತೊಬ್ಬರ ಕ್ಷೇಮ ಬಯಸಿದ್ದರಿಂದ ಈ ಸ್ಥಿತಿಗೆ ಬಂದಿದ್ದಾರೆ. ಈಗ ಅನುಕೂಲಸಿಂಧು ರಾಜಕಾರಣ ನಡೆದಿದೆ. ಯಾರು, ಯಾವಾಗ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ’ ಎಂದು ಹೇಳಿದರು.

ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದೇವೆ. ಸುಳ್ಳನ್ನೇ ಬಂಡವಾಳ ಮಾಡಿಕೊಂಡು ನಡೆಯುತ್ತಿದ್ದೇವೆ. ಆದರೆ ಶಿಕ್ಷಣದಿಂದ ಮಾತ್ರ ನಮ್ಮ ಗೌರವ, ಘನತೆ ಹೆಚ್ಚಾಗಲು ಸಾಧ್ಯ ಎಂದರು.

ಸಂಸದ ಜಿ.ಎಸ್.ಬಸವರಾಜು, ‘ಸೋಮಣ್ಣ ಯಾವ ರೀತಿಯ ನಿಲುವು ತಾಳುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಈಗ ಸೋತಿದ್ದರೂ ರಾಜಕೀಯವಾಗಿ ಮನೆಯಲ್ಲಿ ಇರುವುದಿಲ್ಲ. ಹೊರ ಬರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ, ಶಿವಸಿದ್ಧೇಶ್ವರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಎಲ್.ರೇವಣಸಿದ್ಧಯ್ಯ ಇತರರು ಉಪಸ್ಥಿತರಿದ್ದರು.

ರಾಜಕಾರಣದಲ್ಲಿ ಇರುತ್ತೇನೆ: ಸೋಮಣ್ಣ

ತುಮಕೂರು: ‘ರಾಜಕಾರಣದಲ್ಲಿ ನನಗೆ ಆಗಿರುವ ವಂಚನೆ ಅನ್ಯಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಇನ್ನೂ 15–20 ವರ್ಷಗಳ ಕಾಲ ರಾಜಕಾರಣದಲ್ಲಿ ಇರುತ್ತೇನೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು. ಬಿಜೆಪಿ ನಾಯಕರ ಜತೆಗೆ ಮುನಿಸಿಕೊಂಡಿರುವ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುವ ಸಮಯದಲ್ಲೇ ರಾಜಕೀಯ ವಿಚಾರ ಪ್ರಸ್ತಾಪಿಸಿದರು. ‘ಆಗಿರುವ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ಮಠದಲ್ಲಿ ಕಾರ್ಯಕ್ರಮ ಮಾಡಿದ್ದೇನೆ. ಸ್ವಾಭಿಮಾನಕ್ಕೆ ಅಪಚಾರವಾಗಿದ್ದು ಮತ್ತೆ ಮಠಕ್ಕೆ ಬಂದಿದ್ದೇನೆ. ಈ ಕಾರ್ಯಕ್ರಮದ ಮೂಲಕ ಮತ್ತೆ ಅದೃಷ್ಟವಂತನಾಗುತ್ತೇನೆ’ ಎಂದು ತಿಳಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಸ್ವಾಮೀಜಿ ವಿದ್ಯಾಭ್ಯಾಸ ಮಾಡಿದ್ದು ಈಗ ಕಾಲೇಜು ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿದ್ದು ಸ್ವಾಮೀಜಿ ಹೆಸರಿನಲ್ಲಿ ಅಧ್ಯಯನ ಪೀಠ ಮಾಡಬೇಕು ಎಂದು ಒತ್ತಾಯಿಸಿದರು.

ರಾಜಕಾರಣ ಮಾಡಲ್ಲ: ಸ್ವಾಮೀಜಿ

ತುಮಕೂರು: ಗುರುಭವನದ ಉದ್ಘಾಟನೆಗೆ ಕೇವಲ ಕಾಂಗ್ರೆಸ್ ನಾಯಕರನ್ನು ಕರೆದು ರಾಜಕಾರಣ ಮಾಡಲಾಗುತ್ತಿದೆ ಎಂದು ಯಾರೂ ಅನ್ಯಥಾ ಭಾವಿಸಬಾರದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾಡಿಲ್ಲ. ವೇದಿಕೆಯಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಖಂಡರನ್ನಷ್ಟೇ ಅಲ್ಲದೆ ಇತರರನ್ನೂ ಆಹ್ವಾನಿಸಲಾಗಿದೆ ಎಂದರು. ವಿ.ಸೋಮಣ್ಣ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಎಲ್ಲವನ್ನೂ ಸಮಾಧಾನ ಧೈರ್ಯದಿಂದ ಎದುರಿಸುತ್ತಾರೆ. ಹಿಡಿದ ಕೆಲಸವನ್ನು ಸಾಧಿಸಿ ತೋರಿಸುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT