ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Published 11 ಜೂನ್ 2024, 6:03 IST
Last Updated 11 ಜೂನ್ 2024, 6:03 IST
ಅಕ್ಷರ ಗಾತ್ರ

ತುಮಕೂರು: ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಜಿಲ್ಲೆಯ ನೂರಾರು ಸಂಖ್ಯೆಯ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು ನೇತೃತ್ವದಲ್ಲಿ ಕಂದಾಯ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಮೂಲಭೂತ ಸೌಕರ್ಯ ಒದಗಿಸದೆ ಮೊಬೈಲ್ ಆ್ಯಫ್ ಮೂಲಕ ‘ಲ್ಯಾಂಡ್ ಬಿಟ್’ ಕೆಲಸ ಮಾಡಲು ಗುರಿ ನಿಗದಿಪಡಿಸಲಾಗಿದೆ. ಸರ್ಕಾರದ ಜಮೀನು ಒತ್ತುವರಿ ತೆರವು ನಿಟ್ಟಿನಲ್ಲಿ ಮೊಬೈಲ್ ಆ್ಯಫ್ ಮೂಲಕ ಲ್ಯಾಡ್ ಬೀಟ್ ನಡೆಸಿ, ಜಮೀನಿನ ಗಡಿ ಗುರುತಿಸುವ ವೇಳೆ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಜಮೀನಿನ ಹದ್ದು ಬಸ್ತ್ ಗುರುತಿಸುವುದು ಸರ್ವೆ ಇಲಾಖೆ ಕೆಲಸ. ಹಾಗಾಗಿ ಬಾಂದು ಗುರುತಿಸುವ ಕೆಲಸವನ್ನು ಸರ್ವೆ ಇಲಾಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬಗರ್ ಹುಕ್ಕುಂ ಸಾಗುವಳಿಗೆ ಸಂಬಂಧಿಸಿದಂತೆ ಆ್ಯಫ್ ಬಳಸಿ ಜಮೀನು ಮಂಜೂರಾಗಿರುವ ಕಡತಗಳನ್ನು ಅನ್‍ಲೈನ್‍ನಲ್ಲಿ ನಮೂದಿಸುವಂತೆ ಸೂಚಿಸಿದ್ದು, ಈ ಬಗ್ಗೆ ಅಗತ್ಯ ತರಬೇತಿ ನೀಡಬೇಕು. ಆಧಾರ್ ಸೀಡಿಂಗ್, ಚುನಾವಣೆ, ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಕೆಲಸಗಳನ್ನು ಸಹ ಒಟ್ಟಿಗೆ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಂತರ ಜಿಲ್ಲಾ ವರ್ಗಾವಣೆ, ಪತಿ–ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕು. ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಿಸಲು ಸಹಕಾರಿ ಆಗುವಂತೆ ವಸತಿಗೃಹ ನಿರ್ಮಿಸಬೇಕು. ಪಂಚಾಯತ್ ರಾಜ್ ಅಧಿಕಾರಿಗಳ ಬದಲಾಗಿ, ಕಂದಾಯ ಇಲಾಖೆ ಅಧಿಕಾರಿಗಳ ಅಡಿಯಲ್ಲಿ ಕೆಲಸ ನಿರ್ವಹಿಸಲು ಆದೇಶಿಸಬೇಕು. ಪದೋನ್ನತ್ತಿಗೆ ಕ್ರಮ ಕೈಗೊಳ್ಳಬೇಕು, ಕುಂದುಕೊರತೆ ಸಭೆ ನಡೆಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತಮ್ಮ ಹಂತದ ಬೇಡಿಕೆಗಳನ್ನು ಈಡೇರಿಸಲಾಗುವುದು. ಉಳಿದವರನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಅಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಖಜಾಂಚಿ ಮೋಹನ್ ಸೇರಿದಂತೆ ನೂರಾರು ಗ್ರಾಮ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.

ಪ್ರಮುಖ ಬೇಡಿಕೆಗಳು

* ಮೂಲಭೂತ ಸೌಕರ್ಯ ನೀಡದೆ ಮೊಬೈಲ್ ಆ್ಯಪ್ ಮೂಲಕ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಬಾರದು

* ಅಂತರ್ ಜಿಲ್ಲಾ ವರ್ಗಾವಣೆಯನ್ನು ಮತ್ತೆ ಆರಂಭಿಸಬೇಕು

* ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ವ್ಯವಸ್ಥೆ ಮಾಡಿ, ವಸತಿ ಗೃಹಗಳನ್ನು ನಿರ್ಮಾಣ ಮಾಡಿಕೊಡಬೇಕು

* ಬೇರೆ ಇಲಾಖೆಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳ ನಿಯೋಜನೆ ರದ್ದುಪಡಿಸಬೇಕು

* ಪದೋನ್ನತಿ ನೀಡಬೇಕು

* ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು

* ಕುಂದು ಕೊರತೆ ಸಭೆ ನಡೆಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT