ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾ ಸಂಕಲನ ಲೋಕಾರ್ಪಣೆ

Published 15 ಜನವರಿ 2024, 5:32 IST
Last Updated 15 ಜನವರಿ 2024, 5:32 IST
ಅಕ್ಷರ ಗಾತ್ರ

ತುಮಕೂರು: ಜಾನಪದ, ಪೌರಾಣಿಕ, ಅಭಿಜಾತ ಸಾಹಿತ್ಯದ ಕಥನಗಳನ್ನು ಮರು ವಿಶ್ಲೇಷಣೆಗೆ ಒಳಪಡಿಸಿ, ಶೋಧನೆ ನಡೆಸುವ ಗುಣ ಈ ಸಂಕಲನದ ಉದ್ದಕ್ಕೂ ಕಾಣುತ್ತದೆ ಎಂದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ನಗರದಲ್ಲಿ ಶನಿವಾರ ಲೇಖಕ ಗೋವಿಂದರಾಜು ಎಂ.ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂಕಲನದ ಕಥೆಗಳು ಸತ್ಯವನ್ನು ಬಹು ಆಯಾಮಗಳಿಂದ ಪರೀಕ್ಷಿಸಲು ಪ್ರಯತ್ನಿಸುತ್ತವೆ. ಗೋವಿಂದರಾಜು ತಮ್ಮ ಕಥೆಗಳ ಮೂಲಕ ಪರಂಪರೆಯ ಕಥನಗಳನ್ನು ಸಮಕಾಲೀನ ಸಂದರ್ಭದ ತಿಳಿವಳಿಕೆಯ ಜೊತೆಗಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿರುವ ರೂಢಿ, ಕಂದಾಚಾರಗಳನ್ನು ಪ್ರಶ್ನೆ ಮಾಡುವ ಗುಣ, ಕಥೆ ಹೇಳಲು ಬಳಸಿಕೊಂಡ ಭಾಷೆ, ತಂತ್ರಗಾರಿಕೆ ಈ ಸಂಕಲನವನ್ನು ವಿಶಿಷ್ಟವಾಗಿಸಿದೆ ಎಂದರು.

ವಿಮರ್ಶಕ ರವಿಕುಮಾರ್‌ ನೀಹ, ‘ಈ ಸಂಕಲನ ಸಂಶೋಧನೆ, ವಿಮರ್ಶೆ, ಸೃಜನಶೀಲತೆಯ ನಡುವಿನ ಗೆರೆಯನ್ನು ಅಳಿಸಿ ಹಾಕಿದೆ. ಇವು ವಿಮರ್ಶಾ ಸಂಶೋಧನಾತ್ಮಕ ಕಥೆಗಳು. ಇಡೀ ಸಂಕಲನದ ಉದ್ದಕ್ಕೂ ಕಾವ್ಯದ ರೂಪಕಗಳು ಎದುರಾಗುತ್ತವೆ. ಕೆಲವು ಕಥೆಗಳು ಕಾವ್ಯದಿಂದ ಆರಂಭವಾದರೆ ಕೆಲವು ಕಥೆಗಳು ಕಾವ್ಯದಿಂದ ಮುಕ್ತಾಯವಾಗುತ್ತವೆ. ಇವು ಕಾವ್ಯಾತ್ಮಕ ಕಥನ ಸೃಜನೆಗಳೂ ಹೌದು’ ಎಂದು ಅಭಿಪ್ರಾಯಪಟ್ಟರು.

ವಿ.ವಿಯ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ, ‘ಕಥೆ ಏನು ಹೇಳುತ್ತದೆ, ಏನು ಮಾಡುತ್ತದೆ ಎನ್ನುವ ಪ್ರಶ್ನೆಗಳ ಜೊತೆಗೆ ಕಥೆಗಾರ ಏನು ಮಾಡಲು ಹೊರಟಿದ್ದಾನೆ ಎನ್ನುವ ಪ್ರಶ್ನೆಯೂ ಮುಖ್ಯ. ಸಮಕಾಲೀನ ಕಥೆಗಾರರಿಗಿಂತ ಭಿನ್ನ, ಆಶಾದಾಯಕ ಬೆಳಕೊಂದು ಗೋವಿಂದರಾಜು ಕಥೆಗಳಲ್ಲಿದೆ. ಇಲ್ಲಿನ ಕಥೆಗಳಲ್ಲಿ ಕಂಡು ಬರುವ ಮುಖ್ಯ ಗುಣ ಆತ್ಮ ವಿಮರ್ಶೆ. ಕೆಡುಕನ್ನು ಅನ್ಯದಲ್ಲಿ ಗುರುತಿಸುವುದು ಸುಲಭ. ಆದರೆ, ನಮ್ಮೊಳಗಿನ ಕೆಡುಕಿನ ದಾರಿಯನ್ನು ಅನ್ವೇಷಿಸುವುದು ಕಷ್ಟ. ಈ ಕಥೆಗಾರ ಕಷ್ಟದ ಹಾದಿ ಆರಿಸಿದ್ದಾರೆ’ ಎಂದು ಹೇಳಿದರು.

ಲೇಖಕರಾದ ತುಂಬಾಡಿ ರಾಮಯ್ಯ, ಕರೀಗೌಡ ಬೀಚನಹಳ್ಳಿ, ಗೋವಿಂದರಾಜು ಎಂ.ಕಲ್ಲೂರು, ಕಥೆಗಾರರಾದ ಕೇಶವ ಮಳಗಿ, ಎಸ್‌.ಗಂಗಾಧರಯ್ಯ, ಗುರುಪ್ರಸಾದ್ ಕಂಟಲಗೆರೆ, ಪ್ರಾಧ್ಯಾಪಕರಾದ ಗೀತಾ ವಸಂತಾ, ಆಶಾ ಬಗ್ಗನಡು, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಮುಖಂಡರಾದ ಕುಂದೂರು ಮುರುಳಿ, ಚೈತ್ರಾ ಕೊಟ್ಟಶಂಕರ್‌, ಮರಿಯಾಂಬಿ, ಕೆ.ಎಸ್‌.ಸುಧಾಕರ್‌ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT