ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಣ್ಯಾತ್ಮರಿಂದ ಅಭಿವೃದ್ಧಿಗೆ ಅಡ್ಡಿ’

ಹಾಲನೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಗೌರಿಶಂಕರ್
Last Updated 25 ಅಕ್ಟೋಬರ್ 2019, 13:13 IST
ಅಕ್ಷರ ಗಾತ್ರ

ತುಮಕೂರು: ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ಕನಸು ನನ್ನದು. ಅದಕ್ಕಾಗಿ ಸಾಕಷ್ಟು ಅನುದಾನ ತಂದಿದ್ದೇನೆ. ಆದರೆ ಅಭಿವೃದ್ಧಿಗೆ ಕೆಲ ಪುಣ್ಯಾತ್ಮರು ಅಡ್ಡಗಾಲು ಹಾಕಿದ್ದಾರೆ. ಕೆಲಸ ಮಾಡಲು ಬಿಡುತ್ತಿಲ್ಲ. ಗ್ರಾಮಾಂತರ ರಸ್ತೆಗಳೆಲ್ಲವೂ ಚೆನ್ನಾಗಿವೆ ಎನ್ನುವ ಮಾಜಿಗೆ ಕಳೆದ 10 ವರ್ಷಗಳಿಂದ ಹಾಲನೂರು ರಸ್ತೆ ಹದಗೆಟ್ಟಿರುವುದು ಗೊತ್ತಿರಲಿಲ್ಲವೇ ಎಂದು ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶ್‌ಗೌಡ ಹೆಸರು ಹೇಳದೆ ಹರಿಹಾಯ್ದರು.

ಹಾಲನೂರು ಕೆರೆಗೆ ಬಾಗಿನ ಅರ್ಪಿಸಿ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸಿ ಮಾತನಾಡಿದರು.

ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ ಸಂತೋಷ ವ್ಯಕ್ತಪಡಿಸದ ರೈತರು ಕೆರೆಗಳಿಗೆ ನೀರು ತುಂಬಿಸಿದರೆ ಸಂತೋಷಪಡುವರು ಎಂದರು.

‘ರಾಜಕಾರಣ ಹೇಗೆ ಇದ್ದರೂ ನಮ್ಮ ನಿಮ್ಮ ಸಂಬಂಧ ಚೆನ್ನಾಗಿರಬೇಕು ಎನ್ನುವ ಕಾರಣಕ್ಕಾಗಿ ಅಕ್ಕತಂಗಿಯರಿಗೆ, ಅಮ್ಮಂದಿರಿಗೆ ಬಾಗಿನ ನೀಡುತ್ತಿದ್ದೇನೆ. ಗ್ರಾಮಾಂತರ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದೇನೆ ಎಂಬ ಆತ್ಮಸಂತೃಪ್ತಿ ನನಗೆ ಇದೆ ಎಂದರು.

ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್ ಮಾತನಾಡಿ, ಗೌರಿಶಂಕರ್ ಅವರು 20 ವರ್ಷದಿಂದ ಹದಗೆಟ್ಟಿದ್ದ ಹಾಲನೂರು ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಗ್ರಾಮದಲ್ಲಿ ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಶಾಲೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಒಂದೂವರೆ ವರ್ಷದಲ್ಲಿ ಮಾಡಿದ್ದಾರೆ. ಅದಕ್ಕಾಗಿ ಹಾಲನೂರಿನ ಜನರ ಪರವಾಗಿ ಅಭಿನಂದಿಸುವೆ ಎಂದು ಹೇಳಿದರು.

ಹಾಲನೂರು ಕೆರೆಗೆ ನೀರು ಹರಿಸುವುದಕ್ಕಾಗಿ ಗ್ರಾಮಸ್ಥರೆಲ್ಲ ಸೇರಿ ಹಣ ಹಾಕಿ ಕಾಲುವೆಯಲ್ಲಿನ ಹೂಳು ತೆಗೆಸಬೇಕಾಗಿತ್ತು. ಆದರೆ ಶಾಸಕರು ಇದನ್ನು ಮನಗಂಡು ಅನುದಾನ ಬಿಡುಗಡೆ ಮಾಡಿದರು. ಹಾಲನೂರು ದೇಗುಲ ಅಭಿವೃದ್ಧಿಗೆ ಎಚ್‌.ಡಿ.ಕುಮಾರಸ್ವಾಮಿ ₹ 50 ಲಕ್ಷ ಅನುದಾನ ನೀಡಿದ್ದರು. ಅದನ್ನು ತಡೆ ಹಿಡಿಯಲು ಮಾಜಿ ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ವಾಪಸ್ ತೆಗೆಸಿಕೊಂಡಿದ್ದಾರೆ. ಆದರೆ ನಮ್ಮ ಶಾಸಕರು ಅದನ್ನು ವಾಪಾಸ್ ತರುತ್ತಾರೆ ಎನ್ನುವ ಭರವಸೆ ಇದೆ’ ಎಂದು ಹೇಳಿದರು.

ಮುಖಂಡರಾದ ಬೈರೇಗೌಡ, ಹೆಗ್ಗೆರೆ ಆಜಂ, ಎಂ.ಆರ್.ಮಂಜುನಾಥ್, ಚಂದ್ರಣ್ಣ, ಶ್ರೀನಿವಾಸ್, ಜಮುನಾ, ಗೌರಮ್ಮ ಇದ್ದರು.ಶೀಘ್ರ ನಿವೇಶನ ರಹಿತರಿಗೆ ನಿವೇಶನ

‘ಮತ ನೀಡದ ಗ್ರಾಮಗಳ ಕೆರೆಗಳಿಗೆ ಸ್ವಂತ ಖರ್ಚಿನಲ್ಲಿ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ನನಗೆ ಎಲ್ಲರೂ ಒಂದೇ. ಆದರೆ ಪುಣ್ಯಾತ್ಮರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಇನ್ನು ಮೂರು ತಿಂಗಳಲ್ಲಿ ಕ್ಷೇತ್ರದ ನಿವೇಶನ ರಹಿತರಿಗೆ ನಿವೇಶನ ಹಂಚುವುದಕ್ಕೆ ಕ್ರಮ ಕೈಗೊಳ್ಳುವೆ’ ಎಂದು ಗೌರಿಶಂಕರ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT