ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಬಾಲಕಿಯರ ಹಾಸ್ಟೆಲ್‌ನಲ್ಲಿ ಶಾರ್ಟ್‌ ಸರ್ಕೀಟ್‌

ಹಾಸ್ಟೆಲ್ ಹೊರಗೆ ಹೆಣ್ಣು ಮಕ್ಕಳ ವನವಾಸ; ಮೂವರು ಅಸ್ವಸ್ಥ
Published 8 ಜೂನ್ 2024, 7:46 IST
Last Updated 8 ಜೂನ್ 2024, 7:46 IST
ಅಕ್ಷರ ಗಾತ್ರ

ತುಮಕೂರು: ನಗರದ ಬಿ.ಎಚ್.ರಸ್ತೆಯಲ್ಲಿರುವ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕುಸುಮಾ, ಮತ್ತಿಬ್ಬರು ವಿದ್ಯಾರ್ಥಿನಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ತಾತ್ಕಾಲಿಕವಾಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಹಾಸ್ಟೆಲ್‌ಗೆ ಹೋಗಲು ವಿದ್ಯಾರ್ಥಿನಿಯರು ಹಿಂದೇಟು ಹಾಕಿದರು.

ವಿಷಯ ತಿಳಿದ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಹಾಸ್ಟೆಲ್‌ಗೆ ಬಂದಿದ್ದರು. ಕೆಲವರು ಪೋಷಕರ ಜತೆ ತೆರಳಿದರು. 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬಿ.ಎಚ್‌.ರಸ್ತೆಗೆ ಬಂದಿದ್ದರು. ಇದರಿಂದ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.

‘ಜೀವಂತವಾಗಿ ಉಳಿಯುತ್ತೇವೆ ಎಂಬ ನಂಬಿಕೆ ಇರಲಿಲ್ಲ. ತಕ್ಷಣಕ್ಕೆ ಎಲ್ಲರು ಹಾಸ್ಟೆಲ್‌ ಕಟ್ಟಡ ಬಿಟ್ಟು ಹೊರ ಬಂದೆವು. ಈ ಹಿಂದೆ ಹಲವು ಬಾರಿ ಇದೇ ರೀತಿ ಸಮಸ್ಯೆಯಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮೂರು ಜನ ಗಾಬರಿಯಿಂದ ಅಸ್ವಸ್ಥರಾಗಿದ್ದಾರೆ. ಸುಮಾರು ಹತ್ತು ವರ್ಷಕ್ಕಿಂತ ಹಳೆಯ ವೈರ್‌ ಸುಟ್ಟು ಸಮಸ್ಯೆಯಾಗಿದೆ’ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೇ ಸಮಸ್ಯೆ ಬಗೆಹರಿಸಿದ್ದರೆ ಇವತ್ತು ನೂರಾರು ಜನ ಹೆಣ್ಣು ಮಕ್ಕಳು ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಏನಾದರೂ ಸಮಸ್ಯೆಯಾದಾಗ ಮಾತ್ರ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಹಾಸ್ಟೆಲ್‌ ಕಡೆ ಬರುತ್ತಾರೆ. ನಮ್ಮ ಸಮಸ್ಯೆ ಹೇಳಿಕೊಂಡು ಹೋದರೆ ಯಾರೂ ಗಮನ ಗಮನಹರಿಸುವುದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಹಾಸ್ಟೆಲ್‌ನಲ್ಲಿ ಸುಟ್ಟು ಹೋಗಿರುವ ವಿದ್ಯುತ್‌ ಪರಿಕರ
ಹಾಸ್ಟೆಲ್‌ನಲ್ಲಿ ಸುಟ್ಟು ಹೋಗಿರುವ ವಿದ್ಯುತ್‌ ಪರಿಕರ

ಅಧಿಕಾರಿಗಳ ಜತೆ ಮಾತಿನ ಚಕಮಕಿ

ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ಕೃಷ್ಣಪ್ಪ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

‘ಊಟ- ತಿಂಡಿಗೆ ತೊಂದರೆಯಾದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು. ಪ್ರಾಣವೇ ಹೋದರೆ ಯಾರನ್ನು ಕೇಳಬೇಕು. ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿಯೇ ಇರುವ ಹಾಸ್ಟೆಲ್‌ ಬಗ್ಗೆ ಇಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ. ನಗರದಿಂದ ಹೊರಗೆ ಇರುವ ಹಾಸ್ಟೆಲ್‌ಗಳು ಬಗ್ಗೆ ಯಾರು ಮಾತನಾಡಬೇಕು. ಅಧಿಕಾರಿಗಳ ತಾತ್ಸಾರ ನಿರ್ಲಕ್ಷ್ಯ ಭಾವನೆಯಿಂದ ಸಮಸ್ಯೆ ಎದುರಾಗಿದೆ’ ಎಂದು ವಿದ್ಯಾರ್ಥಿನಿಯರ ಆರೋಪಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ

ಸರ್ಕೀಟ್‌ ಬೋರ್ಡ್‌ ಸುಟ್ಟು ಹೋಗಿದೆ. ಇದಕ್ಕೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಮಕ್ಕಳು ಭಯದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು.

- ಶುಭ ಕಲ್ಯಾಣ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT