ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ಶಾಲೆ ಕೆಲವು; ಸಮಸ್ಯೆ ಹಲವು

ಕೊರಟಗೆರೆ ತಾಲ್ಲೂಕಿನಲ್ಲಿ ಐದು ವಸತಿ ಶಾಲೆ: ಕಾಯಂ ಸಿಬ್ಬಂದಿ ಕೊರತೆ
Published 11 ಜನವರಿ 2024, 7:11 IST
Last Updated 11 ಜನವರಿ 2024, 7:11 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನಲ್ಲಿರುವ ಐದು ವಸತಿ ಶಾಲೆಗಳಲ್ಲಿ ಬಹುತೇಕ ಎಲ್ಲೆಡೆ ಶಿಕ್ಷಕರ ಕೊರತೆ ಇದೆ. ಬೊಧನೆಗೆ ಅತಿಥಿ ಶಿಕ್ಷಕನ್ನೇ ಅವಲಂಬಿಸುವ ಅನಿವಾರ್ಯವಿದೆ.

ಕೋಟ್ಯಂತರ ರೂಪಾಯಿ ವ್ಯಯಿಸಿ ಐದು ಕಡೆಗಳಲ್ಲಿ ವಸತಿ ಶಾಲೆಗಳನ್ನು ಹೈಟೆಕ್‌ ಮಾಡಲಾಗಿದೆ. ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಆದರೆ ಅಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರೇ ಇಲ್ಲವಾಗಿದೆ. ಇರುವ ಎಲ್ಲ ವಸತಿ ಶಾಲೆಯಲ್ಲೂ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಸದ್ಯಕ್ಕೆ ಬೋಧನೆ ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ ರೆಡ್ಡಿಕಟ್ಟೆಬಾರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೋಳಾಲದ ಅಂಬೇಡ್ಕರ್ ವಸತಿ ಶಾಲೆಗಳು ಪರಿಶಿಷ್ಟ ಪಂಗಡದ ವಸತಿ ಶಾಲೆಗಳು. ಹುಲಿಕುಂಟೆ ಬಳಿಯ ಕಿತ್ತೂರರಾಣಿ ಚೆನ್ನಮ್ಮ, ಬೈಚಾಪುರದ ಬಳಿಯ ಮೊರಾರ್ಜಿ ವಸತಿ ಶಾಲೆ ಹಾಗೂ ಸಿದ್ದರಬೆಟ್ಟದ ಇಂದಿರಾಗಾಂಧಿ ಶಾಲೆ ಪರಿಶಿಷ್ಟ ಜಾತಿಯ ವಸತಿ ಶಾಲೆಗಳು. ಬಜ್ಜನಹಳ್ಳಿ ಬಳಿ ಏಕಲವ್ಯ ವಸತಿ ಶಾಲೆ ಕೂಡ ಇದೆ.

ತಾಲ್ಲೂಕಿನಲ್ಲಿರುವ ಎಲ್ಲ ವಸತಿ ಶಾಲೆಗಳಲ್ಲೂ ಕಾಯಂ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಸಂಖ್ಯೆ ದೊಡ್ಡದಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಮೊದಲೆಲ್ಲಾ ವಸತಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿ ಬೀಳುತ್ತಿದ್ದರು. ಎಲ್ಲ ವಸತಿ ಶಾಲೆಗಳೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತಿತ್ತು. ಆದರೆ ಈಚೆಗೆ ಎಲ್ಲೆಡೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸೀಟ್‌ಗಳು ಖಾಲಿ ಉಳಿದಿವೆ. ಇಲ್ಲಿನ ಅವ್ಯವಸ್ಥೆ ಗಮನಿಸಿ ವಸತಿ ಶಾಲೆಗೆ ಸೇರಿದ್ದ ವಿದ್ಯಾರ್ಥಿಗಳನ್ನು ಪೋಷಕರು ಬೇರೆ ಶಾಲೆಗೆ ಸೇರಿಸಿದ್ದಾರೆ. ಇದರಿಂದಾಗಿ ದಾಖಲಾತಿ ಕೂಡ ಇಳಿಮುಖವಾಗುತ್ತಿದೆ.

ಹುಲಿಕುಂಟೆ ಬಳಿಯ ಕಿತ್ತೂರರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಸ್ನಾನ ಹಾಗೂ ಶೌಚ ಗೃಹ ಶಿಥಿಲಾವಸ್ಥೆ ತಲುಪಿವೆ. ಕೋವಿಡ್ ವೇಳೆ ಈ ಶಾಲೆಯನ್ನು ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲಾಗಿತ್ತು. ಆಗ ಶಾಲೆಯಲ್ಲಿದ್ದ ಹಾಸಿಗೆಗಳನ್ನು ರೋಗಿಗಳಿಗೆ ನೀಡಲಾಗಿತ್ತು. ಇದರಿಂದ ಅನೇಕ ಹಾಸಿಗೆ ಹಾಳಾಗಿವೆ. ಆದರೂ ವಿದ್ಯಾರ್ಥಿಗಳಿಗೆ ಈವರೆಗೆ ಹಾಸಿಗೆ ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಬಹುತೇಕ ವಿದ್ಯಾರ್ಥಿನಿಯರು ಬೆಡ್‌ಶೀಟ್ ಹಾಸಿಕೊಂಡು ಮಲಗುವ ಅನಿವಾರ್ಯತೆ ಇದೆ.

ರೆಡ್ಡಿಕಟ್ಟೆಬಾರೆ ವಸತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲಾ ಆವರಣ ಗೋಡೆ ಕಳೆದ ವರ್ಷದ ಮಳೆಗೆ ಕುಸಿದಿದೆ. ಗ್ರಾಮದಿಂದ ಹೊರ ವಲಯದ ಗುಡ್ಡಗಾಡು ಪ್ರದೇಶದಲ್ಲಿರುವ ಹೆಣ್ಣು ಮಕ್ಕಳ ವಸತಿ ಶಾಲೆಗೆ ಭದ್ರತೆಯ ಆತಂಕ ಎದುರಾಗಿದೆ. ಈ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸಿದ್ಧರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗುವ ರಸ್ತೆಯ ಸ್ಥಿತಿ
ಸಿದ್ಧರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗುವ ರಸ್ತೆಯ ಸ್ಥಿತಿ

ರೆಡ್ಡೆಕಟ್ಟೆಬಾರೆ ವಸತಿ ಶಾಲೆಗೂ ಕಾಂಪೌಂಡ್ ಇಲ್ಲ. ತಾತ್ಕಾಲಿಕವಾಗಿ ತಂತಿ ಬೇಲಿ ಹಾಕಿದ್ದು, ಅಲ್ಲಲ್ಲಿ ಅದೂ ಹಾಳಾಗಿದೆ.  ಬೈಚಾಪುರದ ಬಳಿಯ ಪಿಯು ಕಾಲೇಜು ಒಳಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕೂಡ ಕಾಂಪೌಂಡ್ ಇಲ್ಲ. ಸಿದ್ದರಬೆಟ್ಟದ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಕೋಳಾಲದ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಕೆಲವೇ ತಿಂಗಳ ಹಿಂದೆ ಒಂದೇ ಸಮಯದಲ್ಲಿ ಉದ್ಘಾಟನೆಗೊಂಡವು. ಊರ ಹೊರವಲಯದ ಗುಡ್ಡಗಾಡು ಪ್ರದೇಶದಲ್ಲಿ ಸುಸಜ್ಜಿತ ಕಟ್ಟಡವನ್ನು ಹೈಟೆಕ್‌ ಆಗಿ ನಿರ್ಮಿಸಲಾಗಿದೆ. ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಶಾಲೆಗಳಿಗೆ ಹೋಗಲು ಸರಿಯಾದ ರಸ್ತೆ ನಿರ್ಮಿಸಿಲ್ಲ.

ಎಲ್ಲ ವಸತಿ ಶಾಲೆ‌ಗಳಿಗೂ ಈ ಹಿಂದೆ ನೀಡುತ್ತಿದ್ದ ‘ಸುಚಿ ಸಂಭ್ರಮ’ ಕಿಟ್ ನೀಡಿ ವರ್ಷಗಳೇ ಕಳೆದಿವೆ. ವಿದ್ಯಾರ್ಥಿಗಳು ಈ ಸೌಲಭ್ಯದಿಂದಲೂ ವಂಚಿತರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT