ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

Published 16 ಮೇ 2024, 5:58 IST
Last Updated 16 ಮೇ 2024, 5:58 IST
ಅಕ್ಷರ ಗಾತ್ರ

ತುಮಕೂರು: ಹನಿ ನೀರಾವರಿಯ ಸಹಾಯ ಧನಕ್ಕೆ ಜಮೀನಿನ ಮಣ್ಣು, ನೀರಿನ ಪರೀಕ್ಷೆ ಕಡ್ಡಾಯಗೊಳಿಸಿದ ನಂತರ ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುವ ರೈತರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ಹನಿ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ‘ಮಣ್ಣು ಪರೀಕ್ಷಾ ಪ್ರಯೋಗಾಲಯ’ಕ್ಕೆ ಮಣ್ಣಿನ ಮಾದರಿ ತರುವವರ ಸಂಖ್ಯೆ ಹೆಚ್ಚಾಗಿದೆ. ಮಣ್ಣಿನ ಸತ್ವ ತಿಳಿದು, ಮಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ಪರೀಕ್ಷೆ ಮಾಡಿಸುವುದಕ್ಕಿಂತ, ಸರ್ಕಾರದ ಸೌಲಭ್ಯ ಪಡೆಯಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮಣ್ಣಿನ ಪರೀಕ್ಷೆಯನ್ನು ರೈತರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಕಳೆದ ಮೂರು ವರ್ಷದಲ್ಲಿ 16,688 ರೈತರು ತಮ್ಮ ಜಮೀನುಗಳ ಮಣ್ಣು ಪರೀಕ್ಷೆ ಮಾಡಿಸಿದ್ದಾರೆ. ಇದರಲ್ಲಿ 323 ಜನ ತಾವೇ ರೈತ ಸಂಪರ್ಕ ಕೇಂದ್ರ, ಪ್ರಯೋಗಾಲಯಕ್ಕೆ ಮಣ್ಣಿನ ಮಾದರಿ ತಂದು ಪರೀಕ್ಷೆಗೆ ನೀಡಿದ್ದಾರೆ. 16,365 ಮಾದರಿಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿ ಪರೀಕ್ಷೆ ಮಾಡಿ, ರೈತರಿಗೆ ‘ಮಣ್ಣು ಆರೋಗ್ಯ ಚೀಟಿ’ ವಿತರಿಸಿದ್ದಾರೆ.

2021–22ರಲ್ಲಿ 71 ಜನ, 2022–23ರಲ್ಲಿ 93 ಮಂದಿ, 2023–24ರಲ್ಲಿ 159 ರೈತರು ಸ್ವತಃ ತಾವೇ ಮಣ್ಣಿನ ಮಾದರಿ ತಂದು ಪರೀಕ್ಷೆ ಮಾಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಮಣ್ಣು ಆರೋಗ್ಯ ಅಭಿಯಾನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 16,365 ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಮಣ್ಣಿನ ಸ್ಥಿತಿ ಹೇಗಿದೆ? ಮಣ್ಣಿನಲ್ಲಿ ಯಾವೆಲ್ಲ ಅಂಶಗಳ ಕೊರತೆ ಇದೆ ಎಂಬುವುದರ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ.

ಕೃಷಿ ಇಲಾಖೆಯಿಂದ ರೈತರಿಗೆ ಅರಿವು ಮೂಡಿಸುವ ಕೆಲಸವಾಗುತ್ತಿಲ್ಲ. ಮಣ್ಣು ಪರೀಕ್ಷೆಯೂ ಕೇವಲ ನಾಮಕಾವಸ್ತೆ ಎಂಬಂತೆ ನಡೆಯುತ್ತಿದೆ. ಪರೀಕ್ಷೆ ಮಾಡಿ ರೈತರಿಗೆ ‘ಮಣ್ಣು ಆರೋಗ್ಯ ಚೀಟಿ’ ವಿತರಿಸಲಷ್ಟೇ ಅಧಿಕಾರಿಗಳು ಸೀಮಿತವಾಗಿದ್ದಾರೆ. ಪರೀಕ್ಷೆಯ ನಂತರ ರೈತರ ಜಮೀನಿನಲ್ಲಿ ಏನು ಬದಲಾವಣೆಯಾಗಿದೆ. ಮಣ್ಣಿನ ಪರೀಕ್ಷೆಯ ಪ್ರಯೋಜನವಾಗಿದೆಯೇ? ಇಲ್ಲವೇ? ಎಂದು ಪರಿಶೀಲನೆ ನಡೆಸುವ ಗೋಜಿಗೆ ಹೋಗುತ್ತಿಲ್ಲ’ ಎಂಬ ಆರೋಪ ರೈತ ವಲಯದಿಂದ ಕೇಳಿ ಬರುತ್ತಿದೆ.

ಕೃಷಿ ಇಲಾಖೆಯ ಅಧಿಕಾರಿಗಳು ಒಮ್ಮೆ ‘ಮಣ್ಣು ಆರೋಗ್ಯ ಚೀಟಿ’ ವಿತರಿಸಿದ ನಂತರ ಮತ್ತೆ ಇತ್ತ ತಿರುಗಿಯೂ ನೋಡಿಲ್ಲ. ಪರೀಕ್ಷೆಯ ನಂತರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ತಿಳಿಸಿ, ರೈತರಿಗೆ ನೆರವಾಗುವ ಕೆಲಸ ಮಾಡುವುದಿಲ್ಲ. ಅಧಿಕಾರಿಗಳು ಸರ್ಕಾರಕ್ಕೆ ‘ದಾಖಲೆ’ ಸಲ್ಲಿಸಲು ಮಣ್ಣು ಪರೀಕ್ಷೆ ಮಾಡುತ್ತಾರೆ’ ಎಂದು ಹೆಬ್ಬೂರಿನ ರೈತ ಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ದಾಖಲೆಗಾಗಿ ಮಣ್ಣು ಪರೀಕ್ಷೆ

ಕೃಷಿ ಇಲಾಖೆಯಿಂದ ಮಣ್ಣಿನ ಪರೀಕ್ಷೆ ಸರಿಯಾಗಿ ಆಗುತ್ತಿಲ್ಲ. ರೈತರು ಸಹ ಪ್ರಾಮಾಣಿಕವಾಗಿ ಪರೀಕ್ಷೆ ಮಾಡಿಸುತ್ತಿಲ್ಲ. ಅಧಿಕಾರಿಗಳು ರೈತರು ಇಬ್ಬರೂ ಕೇವಲ ದಾಖಲೆಗಾಗಿ ಮಣ್ಣು ಪರೀಕ್ಷೆ ಮಾಡಿಸುತ್ತಿದ್ದಾರೆ. ಭೂಮಿಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲರು ಆಲೋಚಿಸಬೇಕಿದೆ. ಇದು ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸ. ರವೀಶ್‌ ಪ್ರಗತಿಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT