ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಲೋಕಸಭೆ ಕ್ಷೇತ್ರ | ಎಣಿಕೆ ಕೇಂದ್ರದಿಂದ ಕದಲದ ಸೋಮಣ್ಣ

ಕೇಂದ್ರದತ್ತ ಸುಳಿಯದ ಕಾಂಗ್ರೆಸ್‌ ನಾಯಕರು
Published 5 ಜೂನ್ 2024, 6:43 IST
Last Updated 5 ಜೂನ್ 2024, 6:43 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಚುನಾವಣೆ ಮತ ಎಣಿಕೆ ಆರಂಭವಾಗುವುದಕ್ಕೂ ಮುನ್ನವೇ ನಗರದ ವಿಶ್ವವಿದ್ಯಾಲದ ವಿಜ್ಞಾನ ಕಾಲೇಜು ಆವರಣಕ್ಕೆ ಬಂದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವು ಖಚಿತವಾಗುವ ತನಕ ಕೇಂದ್ರದಲ್ಲಿಯೇ ಇದ್ದರು. ಕಾಂಗ್ರೆಸ್‌ ಅಭ್ಯರ್ಥಿ ಸೇರಿದಂತೆ ಪಕ್ಷದ ಯಾವುದೇ ಮುಖಂಡರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ.

ಸೋಮಣ್ಣ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಹಂತದಲ್ಲೂ ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಾ ಹೋದರು. 8 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದು ವಿಜಯದ ನಗೆ ಬೀರಿದರು. ಮತ ಎಣಿಕೆಯ ಪ್ರಯುಕ್ತ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ವಿಜಯೋತ್ಸವಕ್ಕೆ ಅವಕಾಶ ಇರಲಿಲ್ಲ.

ಮತ ಎಣಿಕೆ ಕಾರ್ಯ ಮುಗಿಯುವ ತನಕ ಬಿ.ಎಚ್‌.ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಓಡಾಟ ಬಂದ್‌ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಸುಸೂತ್ರವಾಗಿ ಎಣಿಕೆ ಕೆಲಸ ಮುಗಿಯಿತು. ಸುಮಾರು 40 ದಿನಗಳ ಕಾಲ ವಿದ್ಯುನ್ಮಾನ ಮತಯಂತ್ರ ಇರಿಸಿದ್ದ ‘ಸ್ಟ್ರಾಂಗ್‌ ರೂಮ್‌’ಗೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸಿಆರ್‌ಪಿಎಫ್‌, ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಎಣಿಕೆ ಕಾರ್ಯ ಮುಗಿದ ನಂತರ ಅವರು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಫಲಿತಾಂಶದ ನಂತರ ಸೋಮಣ್ಣ ಬಿಜೆಪಿ, ಜೆಡಿಎಸ್‌ ಕಚೇರಿಗೆ ಭೇಟಿ ನೀಡಿದರು. ಅವರನ್ನು ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಹೂಮಾಲೆ ಹಾಕಿ ಅಭಿನಂದಿಸಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ವಿ.ಸೋಮಣ್ಣ, ‘ಕೂಡಿ ಬಾಳಿದರೆ ಎಲ್ಲವು ಸಾಧ್ಯವಾಗುತ್ತದೆ ಎಂಬುದಕ್ಕೆ ಈ ಚುನಾವಣೆ ಸಾಕ್ಷಿ. ಮಧುಗಿರಿಗೆ ಪ್ರಚಾರಕ್ಕೆ ಹೋಗಿದ್ದಾಗ ಕನಿಷ್ಠ 1 ಮತವಾದರೂ ಹೆಚ್ಚು ಕೊಡು’ ಎಂದು ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಬೇಡಿಕೊಂಡಿದ್ದೆ. 12 ಸಾವಿರ ಲೀಡ್‌ ಬಂದಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲಾಗುವುದು’ ಎಂದರು.

ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‍ಬಾಬು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್‌, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್‌, ಎಂ.ವಿ.ವೀರಭದ್ರಯ್ಯ, ಸುಧಾಕರಲಾಲ್, ಎಚ್.ನಿಂಗಪ್ಪ, ಆರ್.ಸಿ.ಆಂಜನಪ್ಪ, ಟಿ.ಆರ್.ನಾಗರಾಜ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT