ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಭದ ಆಮಿಷ | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಯುವಕನಿಗೆ ₹18 ಲಕ್ಷ ವಂಚನೆ!

Published 15 ಏಪ್ರಿಲ್ 2024, 13:58 IST
Last Updated 15 ಏಪ್ರಿಲ್ 2024, 13:58 IST
ಅಕ್ಷರ ಗಾತ್ರ

ತುಮಕೂರು: ಲಾಭದ ಆಸೆಗೆ ಬಿದ್ದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ ಯುವಕನಿಗೆ ₹18 ಲಕ್ಷ ವಂಚಿಸಲಾಗಿದೆ.

ತಾಲ್ಲೂಕಿನ ಹಿರೇಹಳ್ಳಿ ನಿವಾಸಿ ಅವಿನಾಶ್‌ ಶೆಣೈ ಎಂಬುವರಿಂದ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಸಲಹೆ ನೀಡಲಾಗುವುದು’ ಎಂಬ ಜಾಹೀರಾತು ನೋಡಿ ಮೋಸದ ಬಲೆಗೆ ಬಿದ್ದಿದ್ದಾರೆ.

ಜಾಹೀರಾತಿನಲ್ಲಿದ್ದ ಲಿಂಕ್‌ ಮುಖಾಂತರ ‘ಜಿ–22 ಮಿಹಿರ್‌ ವೋಹ್ರಾ ಇಕ್ವಿಟಿ ಇನ್‌ವೆಸ್ಟ್‌ಮೆಂಟ್‌’ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿದ್ದಾರೆ. ಇಲ್ಲಿಯೇ ಷೇರು ಮಾರುಕಟ್ಟೆಯ ಬೆಲೆ ಏರಿಳಿತದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಗ್ರೂಪ್‌ ಮೂಲಕ ಡಾ.ಮಿಹಿರ್‌ ಎಂಬುವರ ಪರಿಚಯವಾಗಿದೆ. ನಂತರ ಅವಿನಾಶ್‌ ‘ಎಸ್‌ಎಂಸಿ ಪ್ರೊ’ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ, ಹೊಸದಾಗಿ ಖಾತೆ ತೆರೆದಿದ್ದಾರೆ.

ಮೊದಲಿಗೆ ಖಾತೆ ಪರಿಶೀಲಿಸಲು ₹1 ಸಾವಿರ ಹಣವನ್ನು ಸೈಬರ್‌ ಕಳ್ಳರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ಅವಿನಾಶ್‌ ಅವರ ‘ಎಸ್‌ಎಂಸಿ ಪ್ರೊ’ ಅಪ್ಲಿಕೇಷನ್‌ ಖಾತೆಗೆ ₹50 ಸಾವಿರ ‘ಬೋನಸ್‌’ ಹಾಕಿದ್ದಾರೆ. ಇದನ್ನು ನಂಬಿದ ಅವಿನಾಶ್‌ ಮಾರ್ಚ್‌ 28ರಂದು ₹40 ಸಾವಿರ, ಏ. 1ರಂದು ₹85 ಸಾವಿರ, ಏ. 3ರಂದು ₹3.50 ಲಕ್ಷ, ಏ. 7ರಂದು ₹3 ಲಕ್ಷ ಹಣವನ್ನು ಸೈಬರ್‌ ಕಳ್ಳರು ಸೂಚಿಸಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಹೂಡಿಕೆ ಮಾಡಿದ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಎಸ್‌ಎಂಸಿ ಪ್ರೊ ಏಜೆಂಟರೊಬ್ಬರು ವಾಟ್ಸ್‌ ಆ್ಯಪ್‌ ಮುಖಾಂತರ ಮೆಸೇಜ್‌ ಮಾಡಿ, ‘ಒಟ್ಟು ಹಣದ ಶೇ 20ರಷ್ಟು ಪಾವತಿಸಿದರೆ ನಿಮ್ಮ ಹಣ ಹಿಂಪಡೆಯುವುದಕ್ಕೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಅವಿನಾಶ್‌ ಏ. 8ರಂದು ₹6.75 ಲಕ್ಷ ವರ್ಗಾವಣೆ ಮಾಡಿದ್ದಾರೆ.

ಇದಾದ ನಂತರ ಹಣ ವಾಪಸ್‌ ಕೊಡಲು ತೆರಿಗೆ ಕಟ್ಟುವಂತೆ ಹೇಳಿದ್ದಾರೆ. ಅವಿನಾಶ್‌ ಮತ್ತೆ ₹3.56 ಲಕ್ಷ ಹಣವನ್ನು ಸೈಬರ್‌ ವಂಚಕರು ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್‌ ಬಂದಿಲ್ಲ. ‘ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ, ಹಣ ಹಾಕಿಸಿಕೊಂಡು ಮೋಸ ಮಾಡಿದವರನ್ನು ಪತ್ತೆ ಹಚ್ಚಿ ಹಣ ವಾಪಸ್‌ ಕೊಡಿಸುವಂತೆ’ ಸೈಬರ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT