ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರಕ್ಕೆ ಹಾಜರು: ನರೇಗಾ ಕೆಲಸಕ್ಕೆ ಕಾರ್ಮಿಕರ ಕೊರತೆ

ನರೇಗಾ ಕೆಲಸಕ್ಕೆ ಗೈರು, ಚುನಾವಣಾ ಪ್ರಚಾರಕ್ಕೆ ಹಾಜರು
Published 23 ಏಪ್ರಿಲ್ 2024, 14:36 IST
Last Updated 23 ಏಪ್ರಿಲ್ 2024, 14:36 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಓಟಕ್ಕೆ ಚುನಾವಣೆ ‘ಬ್ರೇಕ್‌’ ಹಾಕಿದೆ. ಕೂಲಿ ಕಾರ್ಮಿಕರು ಚುನಾವಣೆ ಪ್ರಚಾರಕ್ಕೆ ಹಾಜರಾಗಿ, ನರೇಗಾ ಕೆಲಸಕ್ಕೆ ಗೈರಾಗುತ್ತಿದ್ದಾರೆ. ಈಗಾಗಲೇ ಆರಂಭಿಸಿರುವ ಕಾಮಗಾರಿ ಮುಂದುವರಿಸಲು ಕೆಲಸಗಾರರು ಸಿಗದಂತಾಗಿದ್ದಾರೆ.

ಎಲ್ಲೆಡೆ ಲೋಕಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗಿದ್ದು, ರಾಜ್ಯ ಮಟ್ಟದ ನಾಯಕರು ಆಗಮಿಸುವ ಕಾರ್ಯಕ್ರಮಗಳಿಗೆ ಸಾಕಷ್ಟು ಸಂಖ್ಯೆಯ ಜನ ಸೇರುತ್ತಿದ್ದಾರೆ. ಜನರನ್ನು ಕರೆತರುವ ಮುಖಂಡರು ಅವರಿಗೆ ಒಂದಷ್ಟು ಹಣ ಕೊಟ್ಟು ಕಳುಹಿಸುತ್ತಾರೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. ಇಡೀ ದಿನ ಬಿಸಿಲಿನಲ್ಲಿ ದುಡಿಯುವುದಕ್ಕಿಂತ ಪ್ರಚಾರಕ್ಕೆ ಹೋಗುವುದು ಲೇಸು ಎಂದುಕೊಂಡವರು ಅತ್ತ ಕಡೆ ಮುಖ ಮಾಡಿದ್ದಾರೆ.

‘ನರೇಗಾ ಯೋಜನೆಯಡಿ ಇಡೀ ದಿನ ಕೆಲಸ ಮಾಡಿದರೆ ₹349 ಸಿಗುತ್ತದೆ. ಅದೇ ಸ್ವಲ್ಪ ಹೊತ್ತು ಯಾವುದಾದರೊಂದು ಪಕ್ಷದ ನಾಯಕರ ಜತೆ ಸುತ್ತಾಡಿದರೆ ₹500, ₹1 ಸಾವಿರ ಕೊಡುತ್ತಾರೆ. ಜನ ಇದರಲ್ಲಿ ತುಂಬಾ ಸುಲಭದ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನರೇಗಾ ಕಾಮಗಾರಿಗಳಿಗೆ ಕಾರ್ಮಿಕರು ಸಿಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ತಿಳಿಸಿದರು.

ಏ. 1ರಿಂದ ನರೇಗಾ ಕೂಲಿ ಹಣವೂ ಹೆಚ್ಚಾಗಿದೆ. ₹316 ಇದ್ದ ಕೂಲಿ ಈಗ ₹349 ಆಗಿದ್ದು, ₹33 ಹೆಚ್ಚಳವಾಗಿದೆ. ಚುನಾವಣೆಯ ಕಾರಣದಿಂದಾಗಿ ಹೆಚ್ಚಿನ ಕಾರ್ಮಿಕರು ಇತ್ತ ಆಸಕ್ತಿ ತೋರುತ್ತಿಲ್ಲ. ಕಾರ್ಮಿಕರ ಕೊರತೆಯಿಂದ ನರೇಗಾ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಕಳೆದ ವರ್ಷ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿತ್ತು. ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದ ಗಮನ ಸೆಳೆದಿತ್ತು. ಈ ವರ್ಷ ಪ್ರಾರಂಭದಲ್ಲಿ ವಿಘ್ನ ಎದುರಾಗಿದೆ.

ಜಿಲ್ಲೆಯಾದ್ಯಂತ ಕಳೆದ ವರ್ಷ ಸರಿಯಾಗಿ ಮಳೆಯಾಗದೆ ರೈತಾಪಿ ವಲಯ ತತ್ತರಿಸಿತ್ತು. ಗ್ರಾಮೀಣ ಭಾಗದ ಜನರು ಕೆಲಸ ಅರಸಿ ನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ‘ಮಿಷನ್ 500 ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು.

ಇದರ ಮುಂದುವರಿದ ಭಾಗವಾಗಿ ಎಲ್ಲ ಕಡೆಗಳಲ್ಲಿ ಶಾಲೆಗಳಲ್ಲಿ ಕಾಂಪೌಂಡ್‌, ಶೌಚಾಲಯ, ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವಾರು ಕಡೆಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆತರುವುದು ಸವಾಲಿನ ಕೆಲಸವಾಗಿದೆ.

₹80 ಕೋಟಿ ಬಾಕಿ

ಜಿಲ್ಲೆಗೆ 2023–24ನೇ ಸಾಲಿನ ₹80 ಕೋಟಿ ಅನುದಾನ ಬರಬೇಕಿದೆ. ಇನ್ನೂ ಎರಡು ತಿಂಗಳ ಕೂಲಿ ಹಣ ಸಾಮಗ್ರಿ ವೆಚ್ಚ ಕಾರ್ಮಿಕರ ಖಾತೆಗಳಿಗೆ ಪಾವತಿಯಾಗಿಲ್ಲ. ಕೆಲಸ ಮಾಡಿದ ಕಾರ್ಮಿಕರು ಹಣಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ₹30 ಕೋಟಿ ಕೂಲಿ ಹಣ ₹50 ಕೋಟಿ ಸಾಮಗ್ರಿ ವೆಚ್ಚ ಬಿಡುಗಡೆಯಾಗಬೇಕಿದೆ. ಈ ಯೋಜನೆಯಡಿ ಕಳೆದ ಆರ್ಥಿಕ ವರ್ಷದಲ್ಲಿ ₹400 ಕೋಟಿ ಅನುದಾನವನ್ನು ಕಾರ್ಮಿಕರ ಖಾತೆಗಳಿಗೆ ಜಮೆ ಮಾಡಲಾಗಿದೆ. ಈ ವರ್ಷ ಈಗಷ್ಟೇ ಕೆಲಸಗಳು ಆರಂಭವಾಗಿದ್ದು ಕಳೆದ ಬಾರಿಗಿಂತ ಪ್ರಸಕ್ತ ಸಾಲಿನಲ್ಲಿ ಮಾನವ ದಿನಗಳ ಸೃಜನೆಯ ಗುರಿ ಹೆಚ್ಚಿಸಲಾಗಿದೆ.

50 ಲಕ್ಷ ಮಾನವ ದಿನಗಳ ಗುರಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯಾದ್ಯಂತ 50 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ. ಏ. 1ರಿಂದ ಈವರೆಗೆ 1.68 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. 2023-24ರಲ್ಲಿ ಇಡೀ ಜಿಲ್ಲೆಗೆ 42 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನಿಗದಿ ಪಡಿಸಲಾಗಿತ್ತು. ಗುರಿ ಮೀರಿ ಸಾಧನೆಯಾಗಿತ್ತು. 63 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿತ್ತು. ಈ ಬಾರಿಯ ಆರ್ಥಿಕ ವರ್ಷದ ಪ್ರಾರಂಭದಲ್ಲಿಯೇ ಚುನಾವಣೆ ಎದುರಾಗಿದ್ದು ನರೇಗಾ ಓಟಕ್ಕೆ ಬ್ರೇಕ್‌ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT