ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪಟೂರು | ನಗರ ಪ್ರಯಾಣ ಪ್ರಯಾಸದಾಯಕ

ಅಡ್ಡಾದಿಡ್ಡಿ ವಾಹನ ಸಂಚಾರ: ವರ್ಷ ಕಳೆದರೂ ಉದ್ಘಾಟನೆಯಾಗದ ಸಂಚಾರ ದೀಪಗಳು
ಪ್ರಶಾಂತ್ ಕೆ.ಆರ್.
Published 8 ಜುಲೈ 2024, 7:37 IST
Last Updated 8 ಜುಲೈ 2024, 7:37 IST
ಅಕ್ಷರ ಗಾತ್ರ

ತಿಪಟೂರು: ನಗರದಲ್ಲಿ ದಿನೇ, ದಿನೇ ವಾಹನ ಹಾಗೂ ಸಾರ್ವಜನಿಕರ ಓಡಾಟ ಹೆಚ್ಚುತ್ತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಕ್ರಮವಹಿಸಬೇಕಾದ  ಪೊಲೀಸ್‌, ನಗರಸಭೆ ಹಾಗೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ನಗರದ ಕೋಡಿ ವೃತ್ತದಿಂದ ಹಾಸನ ವೃತ್ತದವರೆಗೆ ರಸ್ತೆ ವಿಶಾಲವಾಗಿದ್ದು, ರಸ್ತೆ ಮಧ್ಯೆ ವಿಭಜಕವಿದ್ದರೂ ಸುಗಮ ಸಂಚಾರ ಸಾಧ್ಯವಾಗಿಲ್ಲ. ಬೀದಿ ಬದಿ ಎಲ್ಲೆಂದರಲ್ಲಿ ವ್ಯಾಪಾರಿಗಳು ಹೆಚ್ಚುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ.

ಬಿ.ಸಿ. ನಾಗೇಶ್ ಸಚಿವರಾಗಿದ್ದಾಗ ₹58 ಲಕ್ಷ ವೆಚ್ಚದಲ್ಲಿ ನಗರದಲ್ಲಿ ಸಂಚಾರ ದೀಪ ಅಳವಡಿಸಲಾಗಿದೆ. ಎರಡು ವರ್ಷ ಕಳೆದರೂ ಅವಕ್ಕೆ ಚಾಲನೆ ದೊರೆತಿಲ್ಲ.

ನಗರದಲ್ಲಿ ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ. ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಇಲಾಖೆಯಿಂದ ಅರಿವು ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರದ ಸಿಂಗ್ರಿ ವೃತ್ತದಿಂದ ಹಾಸನ ವೃತ್ತದವರೆಗೂ ಎರಡೂ ಬದಿಗಳಲ್ಲಿ ಹಣ್ಣು, ಕಡಲೆಕಾಯಿ, ಹೂವು ಮತ್ತು ತರಕಾರಿ ವ್ಯಾಪಾರಿಗಳ ಜೊತೆಗೆ ಬಟ್ಟೆ ವ್ಯಾಪಾರಿಗಳು, ಟೀ, ತಿಂಡಿ ಹೋಟೆಲ್‍ಗಳು, ಪಾನಿಪೂರಿ ಹೀಗೆ ಒಂದರ ಪಕ್ಕ ಒಂದು ರಸ್ತೆ ಬದಿಯಲ್ಲಿ ವ್ಯಾಪಾರ ಶುರು ಮಾಡುತ್ತಿದ್ದಾರೆ. ಗ್ರಾಹಕರು ರಸ್ತೆಯಲ್ಲಿ ಎಲ್ಲೆಂದರಲ್ಲಿ ಅವರ ವಾಹನ ನಿಲ್ಲಿಸಿ ವ್ಯಾಪಾರ ಮಾಡುತ್ತಾರೆ. ಈ ದಾರಿಯಲ್ಲಿ ಬೇರೆ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ.

ಸಿಂಗ್ರಿ ವೃತ್ತದ ರೈಲ್ವೆ ನಿಲ್ದಾಣದ ಕಡೆಗೆ ಎರಡೂ ಬೀದಿಯ ಇಕ್ಕೆಲಗಳಲ್ಲಿ ಸಣ್ಣ ಮಾರುಕಟ್ಟೆಯೇ ಸೃಷ್ಟಿಯಾಗಿದೆ ಇದರಿಂದ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ನಗರದ ದೊಡ್ಡಪೇಟೆ, ಅರಳಿಕಟ್ಟೆ, ಎಸ್‌ಬಿಐ ಬ್ಯಾಂಕ್ ಮುಂಭಾಗ, ಅಂಬೇಡ್ಕರ್ ವೃತ್ತ ಸುತ್ತಮುತ್ತ ಚಿಕ್ಕ– ಪುಟ್ಟ ಅಂಗಡಿಗಳು ತಲೆಯೆತ್ತಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೇ ಕಾಣದಂತಾಗಿದೆ. ಮೋರ್ ಮುಂಭಾಗ, ಎಲೆ ಆಸರ, ಕನ್ಯಕಾ ಪರಮೇಶ್ವರಿ ದೇವಾಲಯ ರಸ್ತೆ, ಪ್ರಧಾನ ಅಂಚೆ ಕಚೇರಿ ರಸ್ತೆ, ಕಾರೋನೇಷನ್ ರಸ್ತೆ, ಪಿಜಿಎಂ ಕಲ್ಯಾಣ ಮಂಟಪದ ಎದುರು, ರಾಮ ಮಂದಿರ ರಸ್ತೆಗಳಲ್ಲಂತೂ ದೊಡ್ಡ ವಾಹನಗಳಿರಲಿ ದ್ವಿಚಕ್ರ ವಾಹನಗಳ ಸಂಚಾರವೂ ಪ್ರಯಾಸದಾಯಕ.

ಇದೇ ಭಾಗದಲ್ಲಿ ನಗರ ಪೊಲೀಸ್‌ ಠಾಣೆ ಇದ್ದರೂ ಗಮನಹರಿಸಿಲ್ಲ. ಇಲ್ಲಿನ ಮಳಿಗೆಗಳಿಗೆ ಸರಕು ಪೂರೈಸುವ ದೊಡ್ಡ, ದೊಡ್ಡ ಲಾರಿಗಳನ್ನು ರಸ್ತೆಯಲ್ಲೇ ನಿಯಮ ಉಲ್ಲಂಘಿಸಿ ನಿಲುಗಡೆ ಮಾಡಿ ಸರಕು ವಿತರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅಂಬೇಡ್ಕರ್ ವೃತ್ತದ ಬಳಿ ಮಾರನಗೆರೆ, ಶಾರದ ನಗರ ಕಡೆ ಹೋಗುವ ಸಾರ್ವಜನಿಕರು ಹಾಗೂ ಇಲ್ಲಿರುವ ಕಾಲೇಜುಗಳಿಗೆ ತೆರಳಲು ನಿತ್ಯ ಸಾವಿರಕ್ಕೂ ಹೆಚ್ಚು ಮಕ್ಕಳು ರಸ್ತೆ ದಾಟಬೇಕಿದ್ದು ಸದಾ ಗಿಜಿಗುಡುತ್ತಿರುತ್ತದೆ. ಅಂಬೇಡ್ಕರ್ ವೃತ್ತದ ಬಳಿ ಮೇಲ್ಸೇತುವೆ ತುರ್ತು ಅಗತ್ಯ ಎಂದು ಜನರು ಒತ್ತಾಯಿಸಿದ್ದಾರೆ.

ರಸ್ತೆ ಬದಿಗಳಲ್ಲಿ ಸೂಚನಾ ಫಲಕ ಇಲ್ಲ. ಸಿಸಿ ಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಗರದ ಕೆಳ ಸೇತುವೆಯಲ್ಲಿ ವಿದ್ಯುತ್ ಅಳವಡಿಕೆಯಿಲ್ಲದೆ ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರದಲ್ಲಿ ಸಂಚಾರ ನಿಯಮ ಪಾಲನೆಗೆ ಪೊಲೀಸ್ ಸಿಬ್ಬಂದಿ ಅಗತ್ಯ. ಪಾದಚಾರಿ ಮಾರ್ಗ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ವ್ಯಾಪಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಸುಗಮ ಸಂಚಾರಕ್ಕೆ ಅನುಕೂಲಕರ. ನಾಮಫಲಕಗಳ ಆಳವಡಿಕೆ ಅಗತ್ಯ.
ಸುದರ್ಶನ್, ವಾಹನ ಚಾಲಕ
ಶ್ರೀಘ್ರ ಪೊಲೀಸ್‌ ಇಲಾಖೆಯೊಂದಿಗೆ ಚರ್ಚಿಸಿ ಸಂಚಾರ ದೀಪ ಸರಿಪಡಿಸಲಾಗುವುದು. ರಸ್ತೆ ಬದಿ ಅಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗುತ್ತಿದ್ದು ತಳ್ಳು ಗಾಡಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ವಿಶ್ವೇಶ್ವರ ಬದರಗಡೆ, ಪೌರಾಯುಕ್ತ
ನಗರದಲ್ಲಿ ವೀಲ್ಹಿ ಹೆಚ್ಚಳವಾಗಿದ್ದು ರಸ್ತೆ ಸುರಕ್ಷತಾ ಸಪ್ತಾಹಗಳು ಮೆರವಣಿಗೆ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಿದೆ. ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಬಳಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
ವಿ.ಯೋಗೀಶ್, ನಗರಸಭಾ ಸದಸ್ಯ
ತಿಪಟೂರಿನಲ್ಲಿ ವರ್ಷ ಕಳೆದರೂ ಬೆಳಕು ಕಾಣದ ಸಂಚಾರ ದೀಪ
ತಿಪಟೂರಿನಲ್ಲಿ ವರ್ಷ ಕಳೆದರೂ ಬೆಳಕು ಕಾಣದ ಸಂಚಾರ ದೀಪ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ತಿಪಟೂರಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT