ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವಿಮಾನ ನಿಲ್ದಾಣಕ್ಕೆ 10 ವರ್ಷ ಬೇಕು: ಸಚಿವ ಮುರುಗೇಶ್ ನಿರಾಣಿ

Last Updated 23 ಜೂನ್ 2022, 11:14 IST
ಅಕ್ಷರ ಗಾತ್ರ

ತುಮಕೂರು: ತುಮಕೂರು– ಶಿರಾ ಮಧ್ಯೆ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು 10 ವರ್ಷಗಳು ಬೇಕಾಗಬಹುದು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಗುರುವಾರ ತಿಳಿಸಿದರು.

ನಗರದ ಹೊರವಲಯದ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಕೈಗಾರಿಕಾ ಇಲಾಖೆ ಹಮ್ಮಿಕೊಂಡಿದ್ದ ‘ಉದ್ಯಮಿಯಾಗು– ಉದ್ಯೋಗ ನೀಡು’ ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರಿನ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗಿದ್ದು, ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ಇದೆ. ತುಮಕೂರು– ಶಿರಾ ಮಧ್ಯೆ ನಿರ್ಮಾಣ ಮಾಡಬೇಕು ಎಂಬ ಚಿಂತನೆ, ಚರ್ಚೆಯಷ್ಟೇ ನಡೆದಿದೆ. ಆದರೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಹೇಳಿದರು.

ತುಮಕೂರು– ಶಿರಾ ನಡುವೆ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುವುದು. ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ₹1 ಸಾವಿರ ಕೋಟಿ ಅನುದಾನ ನೀಡುತ್ತಿದೆ. ವಿಜಯಪುರ– ಕಲಬುರಗಿ ಮಧ್ಯೆ ಜವಳಿ ಪಾರ್ಕ್, ಯಾದಗಿರಿ– ರಾಯಚೂರು ನಡುವೆ ‘ಡ್ರಗ್ ಪಾರ್ಕ್’ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಹೂಡಿಕೆದಾರರ ಸಮಾವೇಶ: ಬಂಡವಾಳ ಹೂಡಿಕೆದಾರರನ್ನು ಸೆಳೆದು, ಮತ್ತಷ್ಟು ಕೈಗಾರಿಕೆಗಳು ಸ್ಥಾಪನೆಯಾಗುವಂತೆ ಮಾಡಲು ನವೆಂಬರ್ 2ರಿಂದ 4ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಂಡವಾಳ ಆಕರ್ಷಿಸುವಲ್ಲಿ ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ. ಮಕ್ಕಳನ್ನು ಪದವೀಧರರನ್ನಾಗಿ ಮಾಡಿದರೆ ಸಾಲದು, ಅವರನ್ನು ಉದ್ಯಮಿಗಳನ್ನಾಗಿ ಮಾಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಅಂತಹ ಕಾರ್ಯದಲ್ಲಿ ಕೈಗಾರಿಕಾ ಇಲಾಖೆ ತೊಡಗಿಸಿಕೊಂಡಿದೆ ಎಂದರು.

ಕೋವಿಡ್‌ನಿಂದಾಗಿ ಸಣ್ಣ, ಅತಿಸಣ್ಣ ಕೈಗಾರಿಕೆಗಳು ಸಾಕಷ್ಟು ತೊಂದರೆ, ನಷ್ಟ ಅನುಭವಿಸಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾಲ ಮರುಪಾವತಿಗೆ ಕೇಂದ್ರ ಸರ್ಕಾರ ಮತ್ತಷ್ಟು ಸಮಯಾವಕಾಶ ಕಲ್ಪಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT