ಸೋಮವಾರ, ಜುಲೈ 26, 2021
26 °C
ಆಂಧ್ರದ ಮುಖಂಡರ ಮನವೊಲಿಸಿದ ಅಧಿಕಾರಿಗಳು

ತುಮಕೂರು: ಡ್ಯಾಂ ಗೇಟ್ ತೆರೆಯಲು ಆಂಧ್ರದಿಂದ ಬಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ನಾಗಲಮಡಿಕೆ ಚೆಕ್ ಡ್ಯಾಂನಿಂದ ಪೇರೂರು ಡ್ಯಾಂಗೆ ನೀರು ಬಿಡಬೇಕು ಎಂದು ಒತ್ತಾಯಿಸಿ ಗೇಟ್ ತೆಗೆಸಲು ಬಂದಿದ್ದ ಆಂಧ್ರಪ್ರದೇಶದ ಮುಖಂಡರನ್ನು ತಾಲ್ಲೂಕಿನ ಅಧಿಕಾರಿಗಳು ಶನಿವಾರ ತಡೆದರು.

ಕಳೆದ ಕೆಲ ದಿನಗಳಿಂದ ಆಂಧ್ರದ ಆಂಧ್ರನಿವಾ ಯೋಜನೆಯಡಿ ನಾಗಲಮಡಿಕೆ ಚೆಕ್ ಡ್ಯಾಂಗೆ ನೀರು ಹರಿಸಲಾಗುತ್ತಿದೆ. ಜೂನ್ 1ರ ವೇಳೆಗೆ ಚೆಕ್ ಡ್ಯಾಂ ತುಂಬಿತ್ತು. ನಂತರ ಪೆರೂರು ಡ್ಯಾಂಗೆ ನೀರು ಹರಿಯುತ್ತಿದೆ.

ಆದರೆ ಪೇರೂರು ಡ್ಯಾಂ ತುಂಬಲು ಆಂಧ್ರಪ್ರದೇಶ ನೀಡಿರುವ ಕಾಲಾವಕಾಶ ಹಾಗೂ ನೀರಿನ ಪ್ರಮಾಣ ಮುಗಿಯುತ್ತಿರುವುದರಿಂದ, ನಾಗಲಮಡಿಕೆ ಡ್ಯಾಂನಿಂದ ಸ್ವಲ್ಪ ಪ್ರಮಾಣದ ನೀರನ್ನು ಪೇರೂರು ಡ್ಯಾಂಗೆ ಬಿಡಬೇಕು. ಮತ್ತೆ ಆಂಧ್ರದಿಂದ ನೀರು ಬಿಡಲಾಗುವುದು. ಆಗ ನಾಗಲಮಡಿಕೆ ಡ್ಯಾಂ ತುಂಬುತ್ತದೆ ಎಂದು ರಾಪ್ತಾಡು ಕ್ಷೇತ್ರದ ಜನ ಹಾಗೂ ಜನಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ಲೋಕಸಭೆ ಸದಸ್ಯ ಎ.ನಾರಾಯಣಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡ್ಯಾಂನಿಂದ ಪೇರೂರಿಗೆ ಸ್ವಲ್ಪ ಪ್ರಮಾಣದ ನೀರು ಬಿಡಲು ಸೂಚಿಸುವಂತೆ ಪತ್ರ ಬರೆದಿದ್ದರು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು.

ಶನಿವಾರ ಆಂಧ್ರದ ಜನತೆ ಡ್ಯಾಂ ಬಳಿ ಬಂದು ಗೇಟ್ ತೆರೆಯುವಂತೆ ಅಧಿಕಾರಿಗಳ ಮನವೊಲಿಸಿದರು. ಕಂದಾಯ, ಪುರಸಭೆ, ಪೊಲೀಸ್ ಅಧಿಕಾರಿಗಳು ಸರ್ಕಾರದಿಂದ ಆದೇಶ ಬಂದಿಲ್ಲ. ಆದೇಶ ಬಂದ ಕೂಡಲೇ ಪಾಲಿಸಲಾಗುವುದು. ಅಲ್ಲಿಯವರೆಗೆ ಸಹಕರಿಸಿ ಎಂದು ಆಂಧ್ರದಿಂದ ಬಂದವರ ಮನವೊಲಿಸಿ ಕಳುಹಿಸಿದರು.

ಸುಮಾರು 15 ವರ್ಷದಿಂದ ಗೇಟ್ ತೆಗೆದಿಲ್ಲ. ಹೀಗಾಗಿ ಹಾಳಾಗಿದೆ. ಬಲವಂತವಾಗಿ ಗೇಟ್ ತೆಗೆದರೆ ಡ್ಯಾಂಗೆ ಹಾನಿಯಾಗುವ ಸಂಭವವಿದೆ. ತರಾತುರಿಯಲ್ಲಿ ಗೇಟ್ ತೆರೆದರೆ ಡ್ಯಾಂನಲ್ಲಿದ್ದ ನೀರು ಖಾಲಿಯಾಗುತ್ತದೆ. ಇದರಿಂದ ನೀರು ಶೇಖರಣೆಯಾಗದೆ ಹೋಬಳಿಯ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು