ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಧಿಕೃತ ಶಾಲೆ: ಪರ–ವಿರೋಧ ಪ್ರತಿಭಟನೆ

ಶಾಲೆ ಮುಚ್ಚಲು ಮಾನವ ಹಕ್ಕುಗಳ ಸೇವಾಕೇಂದ್ರ ಒತ್ತಾಯ
Published 30 ಮೇ 2024, 7:06 IST
Last Updated 30 ಮೇ 2024, 7:06 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲೆಯ ಅನಧಿಕೃತ ಶಾಲೆಗಳನ್ನು ಮುಚ್ಚಿಸಬೇಕು’ ಹಾಗೂ ‘ಶಾಲೆ ಮಾನ್ಯತೆ ಮುಂದುವರಿಸಬೇಕು’ ಎಂದು ಆಗ್ರಹಿಸಿ ನಗರದ ಡಿಡಿಪಿಐ ಕಚೇರಿ ಮುಂಭಾಗದಲ್ಲಿ ಬುಧವಾರ ಪರ–ವಿರೋಧ ಪ್ರತಿಭಟನೆಗಳು ನಡೆದವು.

‘ಅನಧಿಕೃತ ಶಾಲೆ ಮುಚ್ಚಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಸೇವಾ ಕೇಂದ್ರದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯಕ್ಕೆ ಧರಣಿ ವಿರೋಧಿಸಿ ರುಪ್ಸಾ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಎರಡು ಸಂಘಟನೆಗಳ ಪದಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.

‘ತಾಲ್ಲೂಕಿನಲ್ಲಿ 14 ಶಾಲೆಗಳನ್ನು ಅನಧಿಕೃತ ಎಂದು ಘೋಷಿಸಿ ಒಂದು ತಿಂಗಳು ಕಳೆದರೂ ಶಾಲೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಶಾಲೆಗಳ ಮಾನ್ಯತೆ ರದ್ದುಪಡಿಸಿ, ಮಕ್ಕಳ ಪ್ರವೇಶ ತಡೆಯಬೇಕು. ಪ್ರವೇಶಾತಿ ನಂತರ ಮುಚ್ಚಿದರೆ, ಮಕ್ಕಳು ಎಲ್ಲಿಗೆ ಹೋಗಬೇಕು? ಅನಧಿಕೃತ ಶಾಲೆಗಳಿಗೆ ಮಕ್ಕಳು ಸೇರದಂತೆ ಕ್ರಮವಹಿಸಬೇಕು’ ಎಂದು ಮಾನವ ಹಕ್ಕುಗಳ ಸೇವಾಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಒತ್ತಾಯಿಸಿದರು.

ರುಪ್ಸಾ ಅಧ್ಯಕ್ಷ ಹಾಲನೂರ್‌ ಲೇಪಾಕ್ಷ್‌, ‘ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳಿಲ್ಲ. ಮಾನ್ಯತೆ ನವೀಕರಣಕ್ಕಾಗಿ ಶಾಲೆಗಳಿಗೆ ನೋಟಿಸ್‌ ನೀಡುವುದು ಸಹಜ. ನೋಟಿಸ್‌ ಜಾರಿಯಾದ ಒಂದು ತಿಂಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಮಾನ್ಯತೆ ನವೀಕರಿಸಿಕೊಳ್ಳಲಾಗುತ್ತದೆ. ಈ ಬಾರಿ ಅನ್‍ಲೈನ್‌ ಮೂಲಕ ಅರ್ಜಿ ಕರೆಯಲಾಗಿದೆ. ಚುನಾವಣೆ ಘೋಷಣೆಯಾಗಿದ್ದು, ಕೆಲ ಕಾಲ ತಂತ್ರಾಂಶ ಸ್ಥಗಿತ ಮಾಡಿದ್ದರಿಂದ ಈ ಗೊಂದಲ ಉಂಟಾಗಿದೆ’ ಎಂದರು.

ಜೂನ್ 30ರ ವರೆಗೆ ಮಾನ್ಯತೆ ನವೀಕರಣಕ್ಕೆ ಅವಕಾಶ ಇದೆ. ನೋಟಿಸ್‌ ನೀಡಿರುವುದನ್ನು ತಪ್ಪಾಗಿ ತಿಳಿದು ಧರಣಿ ನಡೆಸುತ್ತಿರುವುದು ಸರಿಯಲ್ಲ. ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ ಎರಡು ಸಂಘಟನೆಗಳ ಸಮಸ್ಯೆ ಆಲಿಸಿದರು. ರುಪ್ಸಾದ ಶ್ರೀನಿವಾಸ್, ಪ್ರದೀಪ್, ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮಾನವ ಹಕ್ಕುಗಳ ಸೇವಾ ಕೇಂದ್ರದ ದರ್ಶನ್, ನವೀನ್, ಅರುಣ್ ಕೃಷ್ಣಯ್ಯ, ಡಮರುಗ ಉಮೇಶ್, ಉಮಾಶಂಕರ್, ಶಶಿಕಿರಣ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT