ಮಂಗಳವಾರ, ಜನವರಿ 21, 2020
28 °C
ಸಂಪಿಗೆಯ ಶ್ರೀನಿವಾಸ ಸ್ವಾಮಿ ದೇಗುಲದಲ್ಲಿ ಹೂವಿನ ಅಲಂಕಾರದ ಸೊಬಗು

ತುರುವೇಕೆರೆ: ‘ಚಂಪಕಾಪುರಿ’ಯಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಪಾಂಡುರಂಗಯ್ಯ ಎ.ಹೊಸಹಳ್ಳಿ Updated:

ಅಕ್ಷರ ಗಾತ್ರ : | |

prajavani

ತುರುವೇಕೆರೆ: ‘ಚಂಪಕಾಪುರಿ’ ಎಂದೇ ಇತಿಹಾಸದಲ್ಲಿ ಹೆಸರಾಗಿರುವ ಪುರಾಣ ಪ್ರಸಿದ್ಧ ತಾಲ್ಲೂಕಿನ ಸಂಪಿಗೆ ಗ್ರಾಮದ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಇದೇ 6ರಂದು ವಿಜೃಂಭಣೆಯಿಂದ ನಡೆಯಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಸೋಮವಾರ ಶ್ರೀನಿವಾಸ ಸ್ವಾಮಿಗೆ ವೈಭವಯುತವಾಗಿ ಏಕಾದಶಿ ಮಹೋತ್ಸವ ನಡೆಸಲು ವೈಕುಂಠ ಏಕಾದಶಿ ಆಚರಣಾ ಸಮಿತಿ ತೀರ್ಮಾನಿಸಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ.

ಸಂಪಿಗೆಯ ವೈಕುಂಠ ಏಕಾದಶಿಯ ಪ್ರಮುಖ ಆಕರ್ಷಣೆ ಎಂದರೆ ಶ್ರೀನಿವಾಸ ಸ್ವಾಮಿ ಮತ್ತು ಅಮ್ಮನವರ ವೈಭವಯುತ ಹೂವಿನ ಅಲಂಕಾರ ಮತ್ತು ದರ್ಶನ. ಅದರಲ್ಲೂ ಸಪ್ತ ದ್ವಾರಗಳ ಮೂಲಕ ದೇವರ ದರ್ಶನ ಪಡೆಯುವುದೇ ಒಂದು ವಿಶೇಷವೆನಿಸುತ್ತದೆ.

ಸೋಮವಾರ ಮುಂಜಾನೆ 4ಕ್ಕೆ ಸುಪ್ರಭಾತ ಸೇವೆ, ಅಭಿಷೇಕದ ನಂತರ ದೇವಾಲಯದಲ್ಲಿನ ಗೋಶಾಲೆಯ ದೇಸಿ ಹಸುಗಳಿಗೆ ಗೋ ಪೂಜೆ, ಗೋಗ್ರಾಸದ ನಂತರ ಪ್ರಾಕಾರ ಉತ್ಸವ ನಡೆಯಲಿದೆ. ಬಳಿಕ ವೈಕುಂಠ ದ್ವಾರ ಪ್ರವೇಶ ನಡೆಯಲಿದೆ.

ಭಕ್ತರು ಬಹು ನಿರೀಕ್ಷೆಯಿಂದ ಕಾಯುವ ಸಪ್ತದ್ವಾರ ದರ್ಶನಕ್ಕೆ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಸಂಜೆ 7ಕ್ಕೆ ನಾಡಿನ ಹೆಸರಾಂತ ಜಾನಪದ ಕಲಾವಿದ ಗುರುರಾಜ ಹೊಸಕೋಟೆ ಮತ್ತು ತಂಡದವರಿಂದ ಜಾನಪದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬೆಳಿಗ್ಗೆಯಿಂದಲೂ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ವಿಶೇಷವಾಗಿ ಪ್ರತಿಯೊಬ್ಬರಿಗೂ ಲಾಡು ಪ್ರಸಾದ ನೀಡುವ ಉದ್ದೇಶದಿಂದ 25 ಸಾವಿರ ಲಾಡುಗಳನ್ನು ತಯಾರಿಸುವ ಕಾರ್ಯ ಬರದಿಂದ ಸಾಗುತ್ತಿದೆ.

ಸಂಜೆ ವೇದಿಕೆಯ ಮೇಲೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾಗಿರುವ ಸೈನಿಕರನ್ನು ಸನ್ಮಾನಿಸಲಾಗುವುದು. ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಜಿಲ್ಲೆಯಿಂದ ನೂರಾರು ಭಜನಾ ಮಂಡಳಿಗಳಿಂದ ನಿರಂತರ ನಾಮ ಸಂಕೀರ್ತನೆಗೋಸ್ಕರ ಪ್ರತ್ಯೇಕ ವೇದಿಕೆ ಸಿದ್ಧಪಡಿಸಲಾಗಿದೆ.

ಪ್ರಸಾದ ವಿನಿಯೋಗಕ್ಕೆ ಹಲವು ಪ್ರಸಾದದ ಕೌಂಟರ್‌ಗಳನ್ನು ಸಹ ತೆರೆಯಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಕೌಂಟರ್‌ಗಳನ್ನು ಮಾಡಲಾಗಿದೆ.

ಗುಬ್ಬಿ ತಾಲ್ಲೂಕಿನ ಸೋಮಲಾಪುರ ಹಾಗೂ ಅಕ್ಕಪಕ್ಕದ ಗ್ರಾಮದ 500ಕ್ಕೂ ಹೆಚ್ಚು ಭಕ್ತರು ಸಂಪಿಗೆ ಗ್ರಾಮಕ್ಕೆ ಪಾದಯಾತ್ರೆ ಮೂಲಕ ತಲುಪಿ ದೇವರ ದರ್ಶನ ಪಡೆಯಲಿದ್ದಾರೆ. ಜೊತೆಗೆ ಸಂಪಿಗೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದು, ಸೋಮವಾರದಂದು ಗ್ರಾಮಕ್ಕೆ ಬರಲಿರುವ ಸಾವಿರಾರು ಭಕ್ತರನ್ನು ಸ್ವಾಗತಿಸಲು ಇಡೀ ಗ್ರಾಮವೇ ತಳಿರು ತೋರಣಗಳ ಸಿಂಗಾರದೊಂದಿಗೆ ಸಜ್ಜಾಗಿದೆ.

ಪುರಾತನ ಕಾಲದಿಂದ ವೈಕುಂಟ ಏಕಾದಶಿ ಮಹೋತ್ಸವ ನಡೆಸಲಾಗಿತ್ತಿದೆ. ದೇವರ ದರ್ಶನ ಪಡೆಯಲು ಎಲ್ಲ ವಯೋಮಾನದವರೂ ಬರುತ್ತಾರೆ. ಭಕ್ತರಿಂದ ನಡೆಯುತ್ತಿರುವುದು ವಿಶೇಷ ಎನ್ನುತ್ತಾರೆ ಸಂಪಿಗೆಯವಾರಾದ ಭಕ್ತ ಯೋಗೀಶ್‍. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು