ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುವೈದ್ಯರೇ ರೈತರ ನೆರವಿಗೆ ಧಾವಿಸಿ: ಉಪೇಂದ್ರ ಪ್ರತಾಪ್ ಸಿಂಗ್

ನಗರದಲ್ಲಿ ನಡೆದ ವಿಶ್ವ ಪಶುವೈದ್ಯಕೀಯ ದಿನ ಕಾರ್ಯಕ್ರಮ
Last Updated 27 ಏಪ್ರಿಲ್ 2019, 15:21 IST
ಅಕ್ಷರ ಗಾತ್ರ

ತುಮಕೂರು: ಬರಗಾಲದಲ್ಲಿ ರೈತರು ಹೈನುಗಾರಿಕೆ, ಪಶು ಸಂಪತ್ತಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪಶು ವೈದ್ಯಕೀಯ ಸಿಬ್ಬಂದಿ ರೈತರಿಗೆ ನೆರವಾಗಬೇಕಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.

ನಗರದ ಸಿದ್ದಗಂಗಾ ಬಾಲಕರ ಕಾಲೇಜಿನಲ್ಲಿ ಜಿಲ್ಲಾ ಪಶುವೈದ್ಯಕೀಯ ಇಲಾಖೆ ಹಾಗೂ ಪಶುವೈದ್ಯರ ಸಂಘ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪಶುವೈದ್ಯಕೀಯ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಶುವೈದ್ಯರ ಕೊರತೆಯಿಂದ ಹಾಲಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ಒತ್ತಡ ಹೆಚ್ಚಿದೆ. ಇದರ ನಿವಾರಣೆಗೆ ಅಗತ್ಯ ಕ್ರಮವನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಹೇಳಿದರು.

ರಾಸುಗಳಿಗೆ ಬರುವ ರೋಗಗಳನ್ನು ಪಶುವೈದ್ಯರು ತಡೆಗಟ್ಟುವುದು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಪಶುಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಎಂ.ಟಿ.ಮಂಜುನಾಥ್ ಮಾತನಾಡಿ, ‘ದೇಶಿಯ ತಳಿಯ ರಾಸುಗಳಲ್ಲಿ ಹಳ್ಳಿಕಾರ್ ತಳಿ ಉತ್ತಮವಾಗಿದ್ದು, ಈ ತಳಿಯ ಅಭಿವೃದ್ದಿಗೆ ಜಿಲ್ಲೆಯ ಎಲ್ಲಾ ಪಶುವೈದ್ಯರು ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.

ಹಳ್ಳಿಕಾರ್ ತಳಿಯಲ್ಲಿ ಒಂದು ಹೊತ್ತಿಗೆ 4 ರಿಂದ 6 ಲೀಟರ್ ಹಾಲು ನೀಡುವ ಹಸುವಿನ ತಳಿಗಳಿವೆ. ಕುಣಿಕೆಹಳ್ಳಿ ಫಾರಂನಲ್ಲಿ ಇದರ ಅಭಿವೃದ್ದಿ ನಡೆಯುತ್ತಿದ್ದು, ಈ ತಳಿಯನ್ನು ಕೊಳ್ಳುವಂತೆ ರೈತರಿಗೆ ಮನವೊಲಿಸುವ ಕೆಲಸವನ್ನು ಮಾಡಬೇಕು ಎಂದು ಪಶುವೈದ್ಯರಿಗೆ ಸೂಚಿಸಿದರು.

ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ರೈತರಿಗೆ ಅತ್ಯಂತ ಸಮೀಪದಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿರುವ ಇಲಾಖೆಯಲ್ಲಿ ಪಶು ವೈದ್ಯಕೀಯ ಇಲಾಖೆ ಮೊದಲ ಸ್ಥಾನದಲ್ಲಿದೆ’ ಎಂದರು.

ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ತಾಧ್ಯಾಪಕ ಡಾ.ವೀರೇಗೌಡ ಅವರು ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಲಸಿಕೆಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಲ್.ಪ್ರಕಾಶ್, ಪಶುವೈದ್ಯಕೀಯ ಸಂಘದ ಉಪಾಧ್ಯಕ್ಷ ದಿವಾಕರ್, ಪದಾಧಿಕಾರಿಗಳಾದ ಡಾ.ಬೂದಿಹಾಳ್ ಹಾಗೂ ಡಾ.ಶಶಿಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT