ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಪಿಎಂಗೆ ಅನ್ಯಾಯ ಮಾಡಿದ್ದು ಯಾರು?

ನನ್ನ ಸೋಲಿಗೆ ಕಾರಣರಾದವರಗೆ ಬುದ್ಧಿ ಕಲಿಸಿ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ
Published 31 ಮಾರ್ಚ್ 2024, 5:23 IST
Last Updated 31 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ತುಮಕೂರು: ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿ ಅನ್ಯಾಯ ಮಾಡಿದವರು ಕಾಂಗ್ರೆಸ್ ನಾಯಕರೇ ಹೊರತು ನಾನಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟನೆ ನೀಡಿದರು.

ನಗರದಲ್ಲಿ ಶನಿವಾರ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಯಾವುದೇ ಕಾರಣಕ್ಕೂ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿ, ಅನ್ಯಾಯ ಮಾಡಿಲ್ಲ. ಅದಕ್ಕೆ ನಾನು ಕಾರಣನಲ್ಲ’ ಎಂದು ಸಮಜಾಯಿಷಿ ಕೊಟ್ಟರು.

‘ಅಂದು ನನ್ನ ಸೋಲಿಗೆ ಕಾರಣರಾದವರನ್ನು ಈಗ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಟ್ಟು ಮುಖಭಂಗ ಮಾಡಿದ್ದಾರೆ. ಅಂತಹವರಿಗೆ ಈ ಚುನಾವಣೆಯಲ್ಲಿ ಸರಿಯಾಗಿ ಬುದ್ಧಿ ಕಲಿಸಬೇಕು’ ಎಂದು ಕೇಳಿಕೊಂಡರು.

‘ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿದರು ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ನಿಲ್ಲುವುದಿಲ್ಲ ಎಂದು ಹೇಳಿದರೂ ಬಲವಂತವಾಗಿ ಅವರ ಪಕ್ಷದವರೇ ಕರೆ ತಂದು ನಿಲ್ಲಿಸಿ, ಎಲ್ಲರೂ ಸೇರಿಕೊಂಡು ಸೋಲಿಸಿದರು. ಆದರೆ ನನ್ನ ಮೇಲೆ ಆಪಾದನೆ ಮಾಡಿದ್ದು, ಮನಸ್ಸಿಗೆ ನೋವಾಯಿತು. ಈ ನೋವು ಕಡಿಮೆಯಾಗಬೇಕಾದರೆ ಈ ಬಾರಿ ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕು’ ಎಂದು ಕೇಳಿಕೊಂಡರು.

‘ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ ಎಂದು ಹೇಳುವ ಕಾಂಗ್ರೆಸಿಗರೇ ಅನ್ಯಾಯ ಸರಿಪಡಿಸಬಹುದಿತ್ತು. ಐದು ವರ್ಷ ಅವಕಾಶ ಇತ್ತು. ವಿಧಾನ ಪರಿಷತ್ತು ಸದಸ್ಯರನ್ನಾಗಿ ಮಾಡಬಹುದಿತ್ತು. ವಿಧಾನಸಭೆಗೆ ಟಿಕೆಟ್ ಕೊಡಬಹುದಿತ್ತು. ಏನನ್ನೂ ಮಾಡದೆ ನನ್ನ ಮೇಲೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ, ‘ಕಳೆದ ಚುನಾವಣೆಯಲ್ಲಿ ದೇವೇಗೌಡರು ಸೋತು ನೋವು ಅನುಭವಿಸಿದರು. ಈ ಸೋಲಿನ ನೋವನ್ನು ಈಗ ಕಾಂಗ್ರೆಸ್‌ನವರು ಅನುಭವಿಸುವಂತೆ ಮಾಡಬೇಕು. ಕಾಂಗ್ರೆಸಿಗರ ಪಿತೂರಿಯಿಂದ ಗೌಡರು ಸೋಲುವಂತಾಯಿತು’ ಎಂದು ಹೇಳಿದರು.

ಮಾಜಿ ಶಾಸಕ ಡಿ.ನಾಗರಾಜಯ್ಯ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ‘ದೇವೇಗೌಡರ ಸೋಲಿಗೆ ಮುದ್ದಹನುಮೇಗೌಡ ಅವರೂ ಕಾರಣರಾಗಿದ್ದು, ಇಡೀ ಒಕ್ಕಲಿಗ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಆದರೆ ಈಗ ಒಕ್ಕಲಿಗರು ಒಂದಾಗಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕೇಳಿಕೊಂಡರು.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ, ಮುಸ್ಲಿಂ ಸಮುದಾಯದವರು ಬೆಂಬಲಿಸುವಂತೆ ಮನವಿ ಮಾಡಿದರು.

ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಕೆ.ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಎ.ನಾರಾಯಣಸ್ವಾಮಿ, ಮುಖಂಡರಾದ ಕೆ.ಎಂ.ತಿಮ್ಮರಾಯಪ್ಪ, ಪಿ.ಆರ್.ಸುಧಾಕರ್‌ಲಾಲ್, ಎಂ.ವಿ.ವೀರಭದ್ರಯ್ಯ, ಟಿ.ಆರ್.ನಾಗರಾಜು, ಕೆ.ಟಿ.ಶಾಂತಕುಮಾರ್, ಬೆಟ್ಟಸ್ವಾಮಿ, ಎಂ.ಆರ್.ಹುಲಿನಾಯ್ಕರ್ ಮೊದಲಾದವರು ಉಪಸ್ಥಿತರಿದ್ದರು.

‘ರಾಜಣ್ಣರನ್ನು ನಂಬಬೇಡಿ’

‘ಸಚಿವ ಕೆ.ಎನ್.ರಾಜಣ್ಣ ಅವರನ್ನು ವಾಲ್ಮೀಕಿ ಸಮಾಜದವರು ನಂಬಬಾರದು. ವಾಲ್ಮೀಕಿ ಸಮಾಜಕ್ಕೆ ನಾನು ಕಿಂಚಿತ್ ಸೇವೆ ಮಾಡಿದ್ದರೆ ಇದೊಂದು ಬಾರಿ ನಮ್ಮನ್ನು ಬೆಂಬಲಿಸಿ’ ಎಂದು ಎಚ್.ಡಿ.ದೇವೇಗೌಡ ಮನವಿ ಮಾಡಿದರು. ‘ವಾಲ್ಮೀಕಿ ರಾಮಾಯಣಕ್ಕೆ ಸಮನಾದ ಮತ್ತೊಂದು ಗ್ರಂಥವಿಲ್ಲ. ವಾಲ್ಮೀಕಿ ಅವರಂತಹ ಮಹಾನುಭಾವರ ಸಮುದಾಯಕ್ಕೆ ಸೇರಿದ್ದೀರಿ. ಆದರೆ ನಿಮ್ಮದೇ ಸಮುದಾಯದ ರಾಜಣ್ಣ ಅವರು ರಾಮನ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಎಂಬುದನ್ನು ನೋಡಿದ್ದೀರಿ. ಪವಿತ್ರವಾದ ಗ್ರಂಥ ಕೊಟ್ಟವರ ಬಗ್ಗೆಯೇ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ’ ಎಂದು ಹೇಳಿದರು. ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಟ್ಟೆ. ನನ್ನ ಸಮುದಾಯಕ್ಕೆ (ಒಕ್ಕಲಿಗರು) ಏನನ್ನೂ ಕೊಡಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು. ‘ನನಗೆ ಜ್ವರ ಇದ್ದರೂ ಪ್ರಚಾರ ಮಾಡಿ ರಾಜಣ್ಣ ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದೆ. ಆದರೆ ನಾನು ಲೋಕಸಭೆ ಚುನಾವಣೆಗೆ ನಿಂತರೆ ಸೋಲಿಸಲು ಪಿತೂರಿ ಮಾಡಿದರು. ನಂಬಿಕೆ ದ್ರೋಹ ಮಾಡಿದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT