ಕುಚ್ಚಲಕ್ಕಿ ಪೂರೈಸಲು ಸರ್ಕಾರಕ್ಕೆ ಶಿಫಾರಸು

7
ಪ್ರಗತಿ ಪರಿಶೀಲನೆ ನಡೆಸಿದ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣಮೂರ್ತಿ

ಕುಚ್ಚಲಕ್ಕಿ ಪೂರೈಸಲು ಸರ್ಕಾರಕ್ಕೆ ಶಿಫಾರಸು

Published:
Updated:
Prajavani

ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಪಡಿತರ ಯುನಿಟ್‌ವೊಂದರ 5 ಕೆ.ಜಿ. ಅಕ್ಕಿ ಮತ್ತು ಎರಡು ಕೆ.ಜಿ. ರಾಗಿ, ಜೋಳ ಅಥವಾ ಗೋಧಿಯನ್ನು ಒದಗಿಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಯುನಿಟ್‌ವೊಂದರ ಏಳು ಕೆ.ಜಿ. ಅಕ್ಕಿಯನ್ನು ಮಾತ್ರ ಒದಗಿಸಲಾಗುತ್ತಿದೆ. ಇಲ್ಲಿಯ ಗ್ರಾಹಕರಿಂದ ಕುಚ್ಚಲಕ್ಕಿಗೆ ಬೇಡಿಕೆ ಇರುವುದು ಸಹಜವಾಗಿದೆ. ಲಭ್ಯ ಕುಚ್ಚಲಕ್ಕಿಯನ್ನು ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಅಗತ್ಯ ಹಾಗೂ ಬೇಡಿಕೆಗಳನ್ನು ಗಮನದಲ್ಲಿರಿಸಿ, ರಾಜ್ಯವಲಯಕ್ಕೆ ಸಮಗ್ರ ವರದಿ ನೀಡಲಾಗುವುದು. ಸರ್ಕಾರಕ್ಕೇ ವರದಿ ಸಲ್ಲಿಸಿ ಗಮನ ಸೆಳೆಯಲಾಗುವುದು ಎಂದ ಅವರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನ ಪಡೆದು, ಅಧಿಕಾರಿಗಳು ಆಹಾರ ಸುರಕ್ಷತೆಯ ನಿಯಮವನ್ನು ಜಾರಿಗೊಳಿಸಬೇಕು ಎಂದರು.

ದಕ್ಷಿಣ ಕನ್ನಡದಲ್ಲಿ ತೊಗರಿ ಬೇಳೆ ಬಳಕೆ ಕಡಿಮೆ. ಅದನ್ನು ಪಡಿತರ ಚೀಟಿದಾರರು ಬಿಟ್ಟು ಹೋಗುವುದು ಗಮನಕ್ಕೆ ಬಂದಿದೆ. ಇದು ಪಡಿತರ ಅಂಗಡಿಯವರಿಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ. ತೊಗರಿ ಬೇಳೆಯನ್ನು ಶೂನ್ಯ ಮಾಡಿ, ಅಕ್ಕಿ ಮಾತ್ರ ವಿತರಿಸಲು ಅವಕಾಶ ಇದೆ. ಇದನ್ನು ಎಲ್ಲ ನ್ಯಾಯಬೆಲೆ ಅಂಗಡಿಯವರು ಮಾಡಬೇಕು ಎಂದ ಅವರು, ಸರ್ಕಾರದ ಯೋಜನೆಗಳು ತಳಮಟ್ಟದ ಫಲಾನುಭವಿಗಳು ತಲುಪಿಸುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಬಿಸಿಯೂಟ, ಆಹಾರ ಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ರಾಜ್ಯದ ಇತರ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಸ್ಥಿತಿ ಗತಿ ಉತ್ತಮವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಾನುಷ್ಠಾನದ ಶ್ರಮ ಪ್ರಶಂಸನೀಯ ಎಂದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಆಯೋಗದ ಸೂಚನೆಗಳನ್ನು ಹಾಗೂ ಸಲಹೆಗಳನ್ನು ಅಳವಡಿಸಿ, ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಆಯೋಗದ ಸದಸ್ಯರಾದ ವಿ.ಬಿ.ಪಾಟೀಲ್, ಡಿ.ಜಿ.ಹಸಬಿ, ಮಂಜುಳಾಬಾಯಿ, ಬಿ.ಎ.ಮಹಮ್ಮದ್ ಆಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕುಮಾರ್ ಸಭೆಯಲ್ಲಿದ್ದರು.

55 ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ

ತೀವ್ರ ಪೌಷ್ಟಿಕಾಂಶ ಕೊರತೆಯಿಂದ ಬಳಲುವ ಮಕ್ಕಳ ಪ್ರಮಾಣ ಜಿಲ್ಲೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್. ಸೆಲ್ವಮಣಿ ಹೇಳಿದರು.

ಜಿಲ್ಲೆಯಲ್ಲಿ ಪೌಷ್ಟಿಕಾಂಶ ಕೊರತೆಯ 55 ಮಕ್ಕಳಿದ್ದಾರೆ. ಅದರಲ್ಲಿ 4 ಮಕ್ಕಳು ಚಿಕಿತ್ಸೆಯಲ್ಲಿ ಚೇತರಿಸಿಕೊಂಡಿದ್ದಾರೆ. ಮಿಕ್ಕ 51 ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ಒಂದೇ ಕಾರಣವಲ್ಲದೇ, ಆನುವಂಶಿಕ ಕಾಯಿಲೆಗಳಿವೆ. ಹೃದಯ ಸಂಬಂಧಿ ಕಾಯಿಲೆಗಳಿವೆ. ಈ ಮಕ್ಕಳಿಗೆ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.

 * ಸಹಕಾರಿ ಸಂಘಗಳು ನಡೆಸುವ ನ್ಯಾಯಬೆಲೆ ಅಂಗಡಿಗಳನ್ನು ಭಾನುವಾರ ತೆರೆಯುವ ಬಗ್ಗೆಯೂ ಸೂಕ್ತ ನಿರ್ದೇಶನಗಳನ್ನು ಆಯೋಗ ನೀಡಲಿದೆ
–ಡಾ.ಎನ್‌. ಕೃಷ್ಣಮೂರ್ತಿ, ಆಹಾರ ಆಯೋಗದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !