ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣಾಂಗ ವ್ಯವಸ್ಥೆಯ ಬಲಕ್ಕೆ ಆಟಿ ಕಷಾಯ ಸಹಕಾರಿ

ಎಸ್‌ಡಿಎಂ ಕಾಲೇಜಿನ ಮುರಳೀಧರ ಬಲ್ಲಾಳ್‌
Last Updated 1 ಆಗಸ್ಟ್ 2019, 14:31 IST
ಅಕ್ಷರ ಗಾತ್ರ

ಉಡುಪಿ: ನಾಗರಪಂಚಮಿಯಿಂದ ಆರಂಭವಾಗುವ ಹಬ್ಬಗಳು ಸಾಲುಸಾಲಾಗಿ ಎದುರುಗೊಳ್ಳುತ್ತವೆ. ಈ ಕಾಲಘಟ್ಟದಲ್ಲಿ ತಯಾರಾಗುವ ಭಕ್ಷ್ಯ ಭೋಜನಗಳು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಒತ್ತಡಕ್ಕೆ ಸಿಲುಕಿಸುತ್ತವೆ. ಈ ನಿಟ್ಟಿನಲ್ಲಿ ದೇಹವನ್ನು ಬಲಗೊಳಿಸಲು ಆಟಿ ಕಷಾಯ ಸೇವನೆ ಅಗತ್ಯ ಎಂದು ಎಸ್‌ಡಿಎಂ ಆಯುರ್ವೇದ ಫಾರ್ಮಸಿಯ ಜನರಲ್‌ ಮ್ಯಾನೇಜರ್ ಮುರಳೀಧರ ಬಲ್ಲಾಳ್‌ ತಿಳಿಸಿದರು.

ಜಾನಪದ ವೈದ್ಯಕೀಯ ಸಂಶೋಧನಾ ಸಂಸ್ಥೆ, ಎಸ್‌ಡಿಎಂ ಆಯುರ್ವೇದ ಕಾಲೇಜು, ಫಾರ್ಮಸಿ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು, ನರಮಂಡಲ ವ್ಯವಸ್ಥೆಯನ್ನು ಬಲಗೊಳಿಸಲು ಪಿತ್ತರಸ ಪ್ರಧಾನವಾದ ಹಾಲೆ ಕಷಾಯ ಸಹಕಾರಿ. ಹಿಂದೆ ಆಟಿ ತಿಂಗಳ 16 ದಿನ ಗಿಡಮೂಲಿಕೆಗಳ ಕಷಾಯ ಸೇವನೆ ಮಾಡಲಾಗುತ್ತಿತ್ತು. ಈಗ ಒಂದು ದಿನ ಮಾತ್ರ ಆಟಿ ಕಷಾಯ ಸೇವನೆ ಮಾಡುವ ಪದ್ಧತಿ ಉಳಿದಿದೆ ಎಂದರು.

ಪರಂಪರೆಯ ಕೊಂಡಿಗಳು ಕಳಚುತ್ತಾ ಹೋದಂತೆ, ಸಂಪ್ರದಾಯಗಳು ಮರೆಯಾದವು. ಆಯುರ್ವೇದ ಮಹತ್ವ ಕಳೆದುಕೊಳ್ಳುತ್ತಾ ಬಂತು. ಆಹಾರ ಪದ್ಧತಿಗಳು ಕಣ್ಮರೆಯಾಗುತ್ತಾ ಬಂದವು. ಸದ್ಯ ಪರಂಪರೆಯಲ್ಲಿ ಉಳಿದುಕೊಂಡಿರುವುದು ವರ್ಷಕ್ಕೊಮ್ಮೆ ಆಟಿ ಕಷಾಯ ಸೇವನೆ ಮಾತ್ರ ಎಂದು ವಿಷಾಧ ವ್ಯಕ್ತಪಡಿಸಿದರು.

ಆಯುರ್ವೇದ ವೈದ್ಯೆ ಸ್ವಪ್ನಾ ಭಂಡಾರಿ ಮಾತನಾಡಿ, ‘ಹಿಂದೆ ಕೂಡು ಕುಟುಂಬ ಪದ್ಧತಿ ಇದ್ದಾಗ, ಮನೆಮಂದಿಯೆಲ್ಲ ಒಟ್ಟಾಗಿ ಆಟಿ ಕಷಾಯ ಸೇವಿಸುತ್ತಿದ್ದರು. ಈಗ ಕುಟುಂಬಗಳು ಕಿರಿದಾಗಿವೆ. ಆಟಿ ಕಷಾಯ ತಯಾರಿ ಜ್ಞಾನ ಹಾಗೂ ವ್ಯವಧಾನ ಇಲ್ಲ. ಇಂತಹ ಕಾಲಘಟ್ಟದಲ್ಲಿ ಸಂಘ ಸಂಸ್ಥೆಗಳು ಸಾಮೂಹಿಕ ಆಟಿ ಕಷಾಯ ಸೇವನೆಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.

ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಆಚರಣೆಗಳು ಹೆಚ್ಚು. ಬಗೆ ಬಗೆಯ ಆಟಿ ಆಹಾರಗಳಿರಬಹುದು, ವಿನೋದದ ಆಟಗಳಿರಬಹುದು, ಹಿರಿಯರನ್ನು ಸ್ಮರಿಸುವ ಹಬ್ಬಗಳು ಆಟಿ ತಿಂಗಳಲ್ಲಿ ಬರುವುದು ವಿಶೇಷ ಎಂದರು.

ಹಿರಿಯರು ಆರೋಗ್ಯದ ಕಾಳಜಿಗೆ ಒತ್ತು ನೀಡುತ್ತಿದ್ದರು. ಪ್ರಕೃತಿಯಲ್ಲಿರುವ ಆಯುರ್ವೇದವನ್ನು ಆರೋಗ್ಯಕ್ಕೆ ಪೂರಕವಾಗಿ ಬಳಸಿಕೊಂಡು ಹಲವು ಆಚರಣೆಗಳನ್ನು ಹುಟ್ಟುಹಾಕಿದರು. ಅದರ ಭಾಗವೇ ಆಟಿ ಕಷಾಯ ಸೇವನೆ ಎಂದರು.

ಆಟಿ ಕಷಾಯ ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಆಟಿ ಅಮಾವಾಸ್ಯೆ ದಿನ ಹಾಲೆ ಮರದಲ್ಲಿ ಸಾವಿರದೊಂದು ಬಗೆಯ ಔಷಧೀಯ ಅಂಶಗಳು ಇರುತ್ತವೆ ಎಂಬುದು ನಂಬಿಕೆ. ವೈಜ್ಞಾನಿಕವಾಗಿಯೂ ಅದು ಸತ್ಯ ಎಂದರು.

ವರ್ಷಪೂರ್ತಿ ಆಹಾರ ಸೇವನೆಯಿಂದ ದೇಹದಲ್ಲಿ ಕೆಲವು ವಿಷಕಾರಿ ಅಂಶಗಳು ಉಳಿದಿರುತ್ತವೆ. ಆಕಸ್ಮಿಕವಾಗಿ ದೇಹ ಸೇರುವ ಕೂದಲಿನಂತಹ ಅಪಾಯಕಾರಿ ವಸ್ತುವನ್ನು ಕರಗಿಸುವ ಶಕ್ತಿ ಹಾಲೆ ಕಷಾಯಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯೆ ಡಾ.ಚೈತ್ರಾ ಹೆಬ್ಬಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು, ಪತ್ರಕರ್ತರಾದ ಸಂತೋಷ್‌ ಸರಳೆಬೆಟ್ಟು, ನಾಗರಾಜ್ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT