ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಎ. ಶೇಷಗಿರಿ ಭಟ್‌
Published 18 ಮೇ 2024, 8:34 IST
Last Updated 18 ಮೇ 2024, 8:34 IST
ಅಕ್ಷರ ಗಾತ್ರ

ಬ್ರಹ್ಮಾವರ: ಕಳೆದ ಎರಡ್ಮೂರು ದಿನಗಳಿಂದ ಸಾಧಾರಣವಾಗಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಭತ್ತದ ಬೀಜ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬ್ರಹ್ಮಾವರ, ಕೋಟ ಹೋಬಳಿಯಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ.

ಈ ಬಾರಿ ಬ್ರಹ್ಮಾವರ, ಕೋಟ ಹೋಬಳಿಯಲ್ಲಿ ಎಂಒ-4ಮತ್ತು ಉಮಾ ತಳಿಯೊಂದಿಗೆ ಸಹ್ಯಾದ್ರಿ ಕೆಂಪು ಮುಕ್ತಿ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೋಟದಲ್ಲಿ 173 ಕ್ವಿಂಟಲ್‌, ಬ್ರಹ್ಮಾವರದಲ್ಲಿ 185 ಕ್ವಿಂಟಲ್‌ ಬೀಜ ದಾಸ್ತಾನು ಲಭ್ಯವಿದ್ದು, ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆಯೂ ಹೆಚ್ಚಿದೆ.

ಎಂಒ–4, ಕೆಂಪು ಮುಕ್ತಿ ಬೀಜ 25 ಕೆ.ಜಿ ಬ್ಯಾಗ್‌ಗೆ ₹1,387.50, ಉಮಾ 30ಕೆ.ಜಿ ಬ್ಯಾಗ್‌ಗೆ ₹1,417 ದರ ನಿಗದಿಯಾಗಿದ್ದು, ಸಬ್ಸಿಡಿ ದರ ಕಳೆದರೆ ರಿಯಾಯಿತಿ ಬೆಲೆಗೆ ಬಿತ್ತನೆ ಬೀಜ ಸಿಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಂಒ–4 ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಬ್ರಹ್ಮಾವರದ ಸಹಾಯಕ ಕೃಷಿ ಅಧಿಕಾರಿ ಮೋಹನ್‌ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ರಹ್ಮಾವರ, ಕೋಟ ಭಾಗದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ರೈತರು ಭೂಮಿಯನ್ನು ಉಳುಮೆ ಮಾಡಿ ಮಣ್ಣು ಹದಗೊಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಉಡುಪಿ, ಬ್ರಹ್ಮಾವರ, ಕೋಟ, ಕುಂದಾಪುರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ಸುಣ್ಣ, ಜೀವನ ಗೊಬ್ಬರ ಮಾರಾಟ ಭರದಿಂದ ಸಾಗಿದೆ.

ಕೋಟ ಹೋಬಳಿಯ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದ ಎಂಒ–4 ಭತ್ತದ ಬೀಜ ದಾಸ್ತಾನು ಖಾಲಿಯಾಗಿದ್ದು, ಹೋಬಳಿಯ ವಿವಿಧೆಡೆ ಜೂನ್ ಮೊದಲ ವಾರದಲ್ಲೇ ನಾಟಿ ಕಾರ್ಯ ಆರಂಭಿಸಲಾಗುತ್ತದೆ. ಹೋಬಳಿಯಲ್ಲಿ 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಸುಪ್ರಭಾ ತಿಳಿಸಿದರು.

ಕೋಟದ ರೈತಧ್ವನಿ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ‘ಈ ಬಾರಿ ಬಿತ್ತನೆ ಬೀಜದ ಕೊರತೆ ಇಲ್ಲ. ರೈತ ಸಂಪರ್ಕ ಕೇಂದ್ರವೂ ಸೇರಿದಂತೆ ಹಲವು ಕೃಷಿಕರಲ್ಲಿ ಭತ್ತದ ಬೀಜ ಲಭ್ಯವಿದ್ದು, ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಈಗಾಗಲೇ ಕೋಟದಲ್ಲಿ ಬೀಜ ಬಿತ್ತನೆಗೆ ಉಳುಮೆ ಕಾರ್ಯ ಚುರುಕಾಗಿದೆ’ ಎಂದು ತಿಳಿಸಿದರು.

ಒಟ್ಟಾರೆ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಮಳೆ–ಬೆಳೆಗೆ ಕೆಲವೆಡೆ ಸೀಯಾಳ ಅಭಿಷೇಕ, ಪ್ರಾರ್ಥನೆ ಕೂಡಾ ನಡೆಸುತ್ತಿರುವುದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT