ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಸಮಸ್ಯೆಗೆ ಸ್ಪಂದಿಸಿ: ಸಿಎಂಗೆ ಮನವಿ

ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಮನವಿ: ಬಜೆಟ್‌ನಲ್ಲಿ ಅನುದಾನ ಸಾದ್ಯತೆ
Last Updated 13 ಫೆಬ್ರುವರಿ 2020, 15:39 IST
ಅಕ್ಷರ ಗಾತ್ರ

ಉಡುಪಿ: ಮೀನುಗಾರರ ಸಾಲ ಮನ್ನಾ, ಸುವರ್ಣ ತ್ರಿಭುಜ ಬೋಟ್‌ನಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ, ಬಜೆಟ್‌ನಲ್ಲಿ ಕರಾವಳಿಯ ಅಭಿವೃದ್ಧಿಗೆ ಯೋಜನೆ ಘೋಷಿಸುವಂತೆ ಒತ್ತಾಯಿಸಿ ಬುಧವಾರ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಉದ್ಯಮಿ ಜಿ.ಶಂಕರ್‌ ನೇತೃತ್ವದ ಮೀನುಗಾರ ಮುಖಂಡರ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಮೀನುಗಾರರ ಸಾಲ ಮನ್ನಾ ಗೊಂದಲ ಬಗೆಹರಿಯಬೇಕು, 5 ತಿಂಗಳಿನಿಂದ ಬಿಡುಗಡೆಯಾಗದ ಡೀಸೆಲ್‌ ಸಬ್ಸಿಡಿಯನ್ನು ಬಿಡುಗಡೆಮಾಡಬೇಕು, ಪ್ರತಿ ತಿಂಗಳ ಆರಂಭದಲ್ಲಿಯೇ ಸಬ್ಸಿಡಿ ಬಿಡುಗಡೆ ಮಾಡಬೇಕು ಎಂದು ನಿಯೋಗ ಮನವಿ ಮಾಡಿತು.

ಕರಾವಳಿ ಭಾಗದಲ್ಲಿ ಸಮಗ್ರ ಮೀನುಗಾರಿಕಾ ನೀತಿ ಜಾರಿ, ವಸತಿ ರಹಿತರಿಗೆ ಮತ್ಸಾಶ್ರಯ ಯೋಜನೆಯಡಿ ವಸತಿ ಮಂಜೂರಾತಿಗೆ ಒತ್ತಾಯ, ವಿವಿಧ ಯೋಜನೆಗಳಡಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದ ಮುಖಂಡರು ತಿಳಿಸಿದ್ದಾರೆ.

ಕೃಷಿ ವಿಜ್ಞಾನ ಕಾಲೇಜು:ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಪ್ರಾಂಗಣದಲ್ಲಿ ಲಭ್ಯವಿರುವ ಸರ್ಕಾರದ ಜಮೀನಿನಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ₹ 5 ಕೋಟಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

2010ರಲ್ಲಿಯೇ ಕೃಷಿ ಕಾಲೇಜು ಸ್ಥಾಪನೆಗೆ ಸರ್ಕಾರ ಹಣ ಬಿಡುಗಡೆಗೆ ಸೂಚಿಸಿತ್ತು. ಆದರೆ, ಹಣ ಬಿಡುಗಡೆಯಾಗದೆ ಕಾಲೇಜು ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಈ ಬಾರಿ ಬಜೆಟ್‌ನಲ್ಲಿ ಅನುದಾನ ಕೊಡುವುದಾಗಿ ಸಿಎಂ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.

ಪುರಸಭೆ ರಚನೆಗೆ ಮನವಿ:ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ರಹ್ಮಾವರ ವೇಗವಾಗಿ ಬೆಳೆಯುತ್ತಿದ್ದು, ಹಂದಾಡಿ, ಚಾಂತಾರು, ವಾರಂಬಳ್ಳಿ, ಹಾರಾಡಿ ಗ್ರಾಮ ಪಂಚಾಯತ್‌ಗನ್ನು ಸೇರಿಸಿ ಪುರಸಭೆ ರಚನೆ ಮಾಡಬೇಕು. ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 30000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಪುರಸಭೆ ರಚನೆ ಮಾಡಿದರೆ ಅನುಕೂಲವಾಗಲಿದೆ ಎಂದು ನಿಯೋಗ ಸಿಎಂಗೆ ಮನವಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT