ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪುನರುತ್ಥಾನಕ್ಕೆ ಮೋದಿ ಸಂಕಲ್ಪ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಣ್ಣ ಹಿಡುವಳಿದಾರರ ಅಭಿವೃದ್ಧಿಗೆ ಫೂರಕ ಯೋಜನೆಗಳ ಜಾರಿ: ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ
Last Updated 19 ಆಗಸ್ಟ್ 2021, 12:28 IST
ಅಕ್ಷರ ಗಾತ್ರ

ಉಡುಪಿ: ದೇಶದ ಶೇ 80ರಷ್ಟು ರೈತರು ಅತ್ಯಂತ ಸಣ್ಣ ಹಿಡುವಳಿಗಳನ್ನು ಹೊಂದಿದ್ದು, ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಪುನರುತ್ಥಾನಕ್ಕೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದು, ಸಣ್ಣ ರೈತರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ‘ಬೆಳೆಕಾಳು ಹಾಗೂ ಖಾದ್ಯ ತೈಲ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿಲ್ಲ. ಶೇ 70ರಷ್ಟು ಖಾದ್ಯತೈಲ ಆಮದಾಗುತ್ತಿದೆ. ಇದಕ್ಕೆ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಖರ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ರೈತರಿಗೆ ಎಣ್ಣೆಕಾಳುಗಳ ಕಿಟ್‌ ವಿತರಿಸಲಾಗುತ್ತಿದೆ. ಖಾದ್ಯ ತೈಲ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಒಣ ಭೂಮಿಯಲ್ಲೂ ಎಣ್ಣೆಕಾಳು ಬೆಳೆಯಲು ಸಂಶೋಧನೆ ನಡೆಯುತ್ತಿದೆ ಎಂದರು.

ದೇಶ ಕಳೆದ ಒಂದು ವರ್ಷದಲ್ಲಿ ದಾಖಲೆ ಪ್ರಮಾಣದ ಆಹಾರ ಪದಾರ್ಥಗಳನ್ನು ಉತ್ಪಾದಿಸಿದೆ. 305 ಮಿಲಿಯನ್ ಮೆಟ್ರಿಕ್ ಟನ್‌ ಬೇಳೆಕಾಳು ಹಾಗೂ ದವಸ ಧಾನ್ಯ, 326 ಮಿಲಿಯನ್‌ ಮೆಟ್ರಿಕ್ ಟನ್‌ ಹಣ್ಣು ಹಾಗೂ ತರಕಾರಿ ಬೆಳೆಯಲಾಗಿದ್ದು, ದಾಖಲೆ ಪ್ರಮಾಣದಲ್ಲಿ ರಫ್ತು ನಡೆದಿದೆ. ಅತಿ ಹೆಚ್ಚು ರಫ್ತು ಮಾಡುವ ವಿಶ್ವದ ಮೊದಲ 10 ರಾಷ್ಟ್ರಗಳಲ್ಲಿ ಭಾರತ 9ನೇ ಸ್ಥಾನ ಪಡೆದಿದೆ ಎಂದರು.

2013 ಹಾಗೂ 14ನೇ ಸಾಲಿನಲ್ಲಿ ಯುಪಿಎ ಸರ್ಕಾರದ ಕೃಷಿ ಬಜೆಟ್ ಗಾತ್ರ ₹ 21,000 ಕೋಟಿ. ಬಿಜೆಪಿ ಸರ್ಕಾರ ಕೃಷಿಗೆ ಮೀಸಲಿಟ್ಟಿರುವ ಅನುದಾನ ₹ 1.30 ಲಕ್ಷ ಕೋಟಿ. ಇದರಲ್ಲಿ ₹ 1.23 ಲಕ್ಷ ಕೋಟಿ ಕೃಷಿಗೆ ಹಾಗೂ ₹ 8,513 ಕೋಟಿ ಕೃಷಿ ಆಧಾರಿತ ಸಂಶೋಧನೆಗೆ ಮೀಸಲಿಡಲಾಗಿದೆ. ಕೃಷಿ ಮೂಲಸೌಕರ್ಯ ಅಭಿವವೃದ್ಧಿ ನಿಧಿಗೆ ₹ 1 ಲಕ್ಷ ಕೋಟಿ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ದೇಶದಾದ್ಯಂತ 10,000 ಕೃಷಿ ಉತ್ಪಾದಕ ಸಂಘಗಳನ್ನು ರಚಿಸಲಾಗುತ್ತಿದ್ದು, ಈ ಸಂಘಗಳು ಸಣ್ಣ ರೈತರನ್ನು ಒಗ್ಗೂಡಿಸಿ ಪಾಳು ಜಮೀನಿನಲ್ಲಿ ಕೃಷಿ ಮಾಡುವಂತೆ, ಬೆಳೆಗೆ ಮಾರುಕಟ್ಟೆ, ಸಂಸ್ಕರಣೆ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಿವೆ.ಸ್ವಸಹಾಯ ಸಂಘಗಳು ಹಾಗೂ ಸೊಸೈಟಿಗಳಿಗೂ ಈ ಸೌಲಭ್ಯ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.

ಬೆಳೆ ವಿಮೆ ನಿಯಮ ಸರಳಗೊಳಿಸಿ ಆ್ಯಪ್‌ ಸಿದ್ಧಪಡಿಸಲಾಗಿದೆ. ಇದರಿಂದ, ಬೆಳೆನಷ್ಟವಾದರೆ ಪರಿಹಾರ ಶೀಘ್ರವಾಗಿ ರೈತರ ಕೈ ಸೇರಲಿದೆ. ರಾಜ್ಯದ ಅಡಿಕೆ ಬೆಳೆಗಾರರ ಹಿತಕಾಯಲು ಸುಪ್ರೀಂಕೋರ್ಟ್‌ನಲ್ಲಿ ಉತ್ತಮ ವಕೀಲರನ್ನು ನೇಮಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.

‘ತೆಂಗಿನ ಮೇಲಿನ ರಫ್ತು ನಿರ್ಬಂಧ ತೆರವು’

ತೆಂಗು ಅಭಿವೃದ್ಧಿ ಮಂಡಳಿಗೆ ತೆಂಗು ಬೆಳೆಗಾರನೇ ಅಧ್ಯಕ್ಷನಾಗಬೇಕು ಎಂಬ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿದೆ. ತೆಂಗು ಉತ್ಪನ್ನಗಳ ರಫ್ತಿನ ಮೇಲಿದ್ದ ನಿರ್ಬಂಧ ತೆಗೆದುಹಾಕಲಾಗಿದ್ದು, ತೆಂಗು ಬೆಳೆಗಾರರಿಗೆ ಲಾಭ ಮಾಡಿಕೊಡಲಾಗಿದೆ. ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳ ಗರಿಷ್ಠ ಮಾರಾಟ ದರವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು ಎಂದು ಉತ್ಪಾದಕ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

‘ಪ್ರಜಾತಂತ್ರ ವ್ಯವಸ್ಥೆ ಬುಡಮೇಲು’

ಕೇಂದ್ರ ಸಚಿವ ಸಂಪುಟದ ನೂತನ ಸಚಿವರನ್ನು ರಾಜ್ಯಸಭೆ ಹಾಗೂ ಲೋಕಸಭೆಗೆ ಪರಿಚಯಿಸುವುದು ಸಂಪ್ರದಾಯ. ಆದರೆ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವರ ಪರಿಚಯ ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ. ರಾಜ್ಯಸಭೆಯಲ್ಲಿ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಸತ್ತಿನಲ್ಲಿ ಹೊಸ ಸಚಿವರನ್ನು ಪರಿಚಯಕ್ಕೆ ಪ್ರತಿಪಕ್ಷಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಜನರ ಬಳಿಗೆ ತೆರಳಿ ಅವರ ಆಶೀರ್ವಾದ ಪಡೆದುಕೊಳ್ಳಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದ್ದು, ಆ.16ರಿಂದ 43 ನೂತನ ಕೇಂದ್ರ ಸಚಿವರು ದೇಶದಾದ್ಯಂತ ಯಾತ್ರೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ನಾಲ್ವರು ಕೇಂದ್ರ ಸಚಿವರು ಯಾತ್ರೆಯ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT