ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ, ಕಾರ್ಪೊರೆಟ್ ಅಕ್ರಮಕೂಟ ಸಂವಿಧಾನ ವಿರೋಧಿ

ಸಿಐಟಿಯು 6ನೇ ಸಮ್ಮೇಳನದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವಾಗ್ದಾಳಿ
Last Updated 7 ಆಗಸ್ಟ್ 2022, 12:41 IST
ಅಕ್ಷರ ಗಾತ್ರ

ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಹೊತ್ತಿನಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡಲು ಮನೆಗಳ ಮೇಲೆ ತಿರಂಗಾ ಹಾರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಆದರೆ, ಇಂದಿಗೂ ಕೋಟ್ಯಂತರ ಮಂದಿ ಸೂರಿಲ್ಲದವರು ಎಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಶ್ನಿಸಿದರು.

ಉಡುಪಿ ಸಾಯಿ ರೆಸಿಡೆನ್ಸಿಯಲ್ಲಿ ಭಾನುವಾರ ನಡೆದ ಸಿಐಟಿಯು 6ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಧ್ವಜ ಹಾರಿಸಲು ಯಾರ ವಿರೋಧವೂ ಇಲ್ಲ. ಆದರೆ, ಸೂರಿಲ್ಲದವರಿಗೆ ಮೊದಲು ಸೂರು ಕೊಡಬೇಕು. ಕಾರ್ಮಿಕರ, ರೈತರ, ಯುವಕರ ಹೋರಾಟದ ಫಲವಾಗಿ ದೊರೆತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮವನ್ನು ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಕರೆ ನೀಡಿದರು.

ಹಿಂದುತ್ವ ಮತ್ತು ಕಾರ್ಪೊರೇಟ್ ಅಕ್ರಮ ಕೂಟಗಳ ಆಡಳಿತವು ದೇಶದ ಸಂವಿಧಾನ ವಿರೋಧಿಯಾಗಿದ್ದು ಕಾರ್ಮಿಕರ ಐಕ್ಯತೆಗೆ ಧಕ್ಕೆಯಾಗಿದೆ. ಬಂಡವಾಳಗಾರರ ಪರವಾದ ಆಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ಹೇರಿಕೆಯಿಂದ ದಿನಗೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ದೇಶದ ಕಾರ್ಮಿಕರು, ರೈತರು ಜಾತಿ ಮತ ಧರ್ಮದ ಭೇದವಿಲ್ಲದೆ ಹೋರಾಟ ನಡೆಸಿದರು. ಕಾರ್ಮಿಕ ವರ್ಗದ ಸಂಘಟನೆ ಐಕ್ಯತೆ, ಹೋರಾಟ ಹಾಗೂ ದೇಶದ ಸಮಗ್ರತೆಯನ್ನು ರಕ್ಷಿಸುವ ಗುರಿ ಹೊಂದಿದೆ. ಸರ್ಕಾರದ ಕಾರ್ಮಿಕ ವಿರೋಧಿ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮನ್ನಡೆಸೋಣ ಎಂದು ಕರೆ ನೀಡಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಮಾತನಾಡಿದರು. ವಿಮಾ ನೌಕರರ ಸಂಘದ ಕೆ.ವಿಶ್ವನಾಥ ಮಾತನಾಡಿದರು. ಸಿಐಟಿಯು ತಾಲ್ಲೂಕು ಅಧ್ಯಕ್ಷ ರಾಮ ಕಾರ್ಕಡ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಂಕರ್, ಮುಖಂಡರಾದ ಶೇಖರ ಬಂಗೇರ, ಭಾರತಿ, ಸಿಐಟಿಯು ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಉಮೇಶ್ ಕುಂದರ್ ಇದ್ದರು.

‌ಸಿಐಟಿಯು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕವಿರಾಜ್ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ಸಮ್ಮೇಳನದಲ್ಲಿ ಉಡುಪಿ ತಾಲ್ಲೂಕನ್ನು ಎರಡು ಸಂಚಲನ ಸಮಿತಿಗೆ ಆಯ್ಕೆ ಮಾಡಲಾಯಿತು. ನೂತನ ಉಡುಪಿ ಸಂಚಲನ ಸಮಿತಿಗೆ 22 ಮಂದಿ ಆಯ್ಕೆ ಮಾಡಿ, ಸಮಿತಿಯ ಸಂಚಾಲಕರನ್ನಾಗಿ ಕವಿರಾಜ್ ಅವರನ್ನು ಆಯ್ಕೆ ಮಾಡಲಯಿತು.

ಬ್ರಹ್ಮಾವರ ತಾಲ್ಲೂಕಿಗೆ 22 ಮಂದಿಯನ್ನೊಳಗೊಂಡ ಸಂಚಲನ ಸಮಿತಿ ಆಯ್ಕೆ ಮಾಡಿ ಸಂಚಾಲಕರನ್ನಾಗಿ ರಾಮ ಕಾರ್ಕಡ, ಸಹ ಸಂಚಲಕರನ್ನಾಗಿ ಸುಭಾಷ್ ನಾಯ್ಕ ಆಯ್ಕೆಯಾದರು. ಸಿಐಟಿಯು ಮುಖಂಡ ಸರೋಜ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT