ಬುಧವಾರ, ಆಗಸ್ಟ್ 10, 2022
23 °C
ಒಂದೇ ದಿನ ನಾಲ್ವರು ಮಹಿಳೆಯರ ಚಿನ್ನದ ಸರ ಎಗರಿಸಿದ ಕಳ್ಳರು

ಸರಣಿ ಸರಗಳವು: ಬೆಚ್ಚಿಬಿದ್ದ ಸಾರ್ವಜನಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಗರದಲ್ಲಿ ಒಂದೇ ದಿನ ನಾಲ್ಕು ಕಡೆಗಳಲ್ಲಿ ಮಹಿಳೆಯರ ಚಿನ್ನದ ಸರಗಳವು ನಡೆದಿದೆ. ಬ್ರಹ್ಮಗಿರಿಯ ಸೇಂಟ್‌ ಸಿಸಿಲಿಸ್ ಶಾಲೆಯ ಎದುರು, ಎಂಜಿಎಂ ಮೈದಾನದ ಶಾಂತ ದುರ್ಗಾ ಫ್ಲಾಟ್‌ ಬಳಿ, ಮಣಿಪಾಲದ ರುದ್ರಪ್ರಿಯ ನಗರ ಹಾಗೂ ಸಂತೋಷ್ ನಗರದ ಪಂಜುರ್ಲಿ ದೇವಸ್ಥಾನದ ಬಳಿ ಮಹಿಳೆಯರ ಚಿನ್ನದ ಸರಗಳನ್ನು ದೋಚಲಾಗಿದೆ.

ಪ್ರಕರಣ–1:

ಕಾಪುವಿನ ಕೋತಲಕಟ್ಟೆಯ ನಿವಾಸಿ ಯಶೋಧಾ ಜೆ.ಬಂಗೇರ ಮಂಗಳವಾರ ಬೆಳಿಗ್ಗೆ 9ಕ್ಕೆ ಸೇಂಟ್ ಸಿಸಿಲಿಸ್‌ ಶಾಲೆಯ ಒಳರಸ್ತೆ ಮೂಲಕ ಬ್ರಹ್ಮಗಿರಿಗೆ ಹೋಗುವಾಗ ಬೈಕ್‌ನಲ್ಲಿ ಬಂದ ಕಳ್ಳ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ. ಮಹಿಳೆ ಪ್ರತಿರೋಧ ತೋರಿದ್ದರಿಂದ ಒಂದು ತುಂಡು ಕುತ್ತಿಗೆಯಲ್ಲಿಯೇ ಉಳಿದು, ಮತ್ತೊಂದು ತುಂಡು ಕಳ್ಳನ ಪಾಲಾಗಿದೆ. ಸರದ ಮೌಲ್ಯ ₹ 45,000 ಎಂದು ಅಂದಾಜಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ–2:

ಗುಲಾಬಿ ನಾಯ್ಕ ಎಂಬುವರು ಬೆಳಿಗ್ಗೆ 8.45ಕ್ಕೆ ಎಂಜಿಎಂ ಗ್ರೌಂಡ್ ಹತ್ತಿರದ ಶಾಂತಾ ದುರ್ಗಾ ಪ್ಲಾಟ್ ಬಳಿ ಹೋಗುವಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಕಳ್ಳ ಕುತ್ತಿಗೆ ಕೈಹಾಕಿ ಸರ ಕೀಳಲು ಯತ್ನಿಸಿದ್ದಾನೆ. ಮಹಿಳೆ ಸರವನ್ನು ಬಿಗಿಯಾಗಿ ಹಿಡಿದಿದ್ದರಿಂದ ಸರದ ಒಂದು ತುಂಡು ಮಾತ್ರ ಕಳ್ಳನ ಪಾಲಾಗಿದೆ. 12 ಗ್ರಾಂ ಸರದ ಅಂದಾಜು ಮೌಲ್ಯ ₹ 50,000 ಆಗಿದೆ.

ಪ್ರಕರಣ–3:

ಲಕ್ಷ್ಮೀಂದ್ರ ನಗರದ ಪದ್ಮಿನಿ ದೇವಿ ಬೆಳಿಗ್ಗೆ 7 ಗಂಟೆಗೆ ವಿ.ಪಿ ನಗರದಲ್ಲಿರುವ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವಾಗ ಬೈಕ್‌ನಲ್ಲಿ ಬಂದ ವ್ಯಕ್ತಿ 30 ಗ್ರಾಂ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಸರದ ಮೌಲ್ಯ ₹ 1.25 ಲಕ್ಷ ಎಂದು ಅಂದಾಜಿಸಲಾಗಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ–4:

ಕುಂಜಿಬೆಟ್ಟುವಿನ ಜಯಂತಿ ಬೆಳಿಗ್ಗೆ 8.30ಕ್ಕೆ ಸಂತೋಷ ನಗರದ ಬಸ್‌ ನಿಲ್ದಾಣದಿಂದ ಪಂಜುರ್ಲಿ ದೈವಸ್ಥಾನದ ಕಡೆಗೆ ಹೋಗುವಾಗ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಕಳ್ಳ ಕಿತ್ತುಕೊಂಡು ಹೋಗಿದ್ದಾನೆ. ಸರದ ಮೌಲ್ಯ ₹ 50,000 ಅಂದಾಜಿಸಲಾಗಿದ್ದು, ಮಣಿಪಾಲ ಪೊಲೀಸರು ಕಳ್ಳನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು