‘ಕೃಷಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ'

7
ಅದಮಾರಿನಲ್ಲಿ ಗದ್ದೆಯಲ್ಲಿ ‘ಕೆಸರ್ದ ಗೊಬ್ಬು’

‘ಕೃಷಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ'

Published:
Updated:
ಎರ್ಮಾಳು ಮೂಡಬೆಟ್ಟು ಬಪ್ರಾಣಿ ಮನೆ ಗದ್ದೆಯಲ್ಲಿ ಶನಿವಾರ ಆಯೋಜಿಸಿದ್ದ ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ಉಪನ್ಯಾಸಕ ನಾಗರತ್ನ ರಾವ್ ದಂಪತಿ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು. (ಪಡುಬಿದ್ರಿ ಚಿತ್ರ)

ಪಡುಬಿದ್ರಿ: ‘ಮಕ್ಕಳು ಮನೆಮಂದಿಯೊಂದಿಗೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಆರೋಗ್ಯವಂತ ಸಮಾಜವನ್ನು ಕಾಣಲು ಸಾಧ್ಯ’  ಎಂದು ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ರಾಮಕೃಷ್ಣ ಪೈ ಅಭಿಪ್ರಾಯಪಟ್ಟರು.

ಆದರ್ಶ ಯುವಕ ಸಂಘ ಮತ್ತು ಮಹಿಳಾ ಮಂಡಳಿ ಹಾಗೂ ಅದಮಾರಿನ ಪೂರ್ಣಪಜ್ಞ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಅದಮಾರು ಘಟಕ ಸಂಯುಕ್ತವಾಗಿ ಎರ್ಮಾಳು ಮೂಡಬೆಟ್ಟು ಬಪ್ರಾಣಿ ಮನೆ ಗದ್ದೆಯಲ್ಲಿ ಶನಿವಾರ ಆಯೋಜಿಸಿದ್ದ ಕೆಸರ್ದ ಗೊಬ್ಬು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕೃಷಿ ಚಟುವಟಿಕೆಗಳು ಪೂರಕವಾಗಿವೆ. ಕಣ್ಣನ್ನು ದಣಿಸಿ ಸಂತೋಷಪಡುವ ಮೊಬೈಲ್‌ಗಳಿಂದ ದೂರವಿದ್ದು, ಕೃಷಿ ಭೂಮಿಗಳಲ್ಲಿ ಕೈ-ಕಾಲು ದಣಿಸಿದಾಗ ದೊರಕುವ ಭತ್ತದಿಂದ ಹೊಟ್ಟೆಗೆ ತೃಪ್ತಿ ಹಾಗೂ ಮಾನಸಿಕ ಆರೋಗ್ಯ ಲಭಿಸಲಿದೆ. ಕೆಸರಿನಲ್ಲಿ ಬೆಳೆಯುವ ಭತ್ತದ ಜತೆಗೆ ನಾವೂ ಬೆಳೆಯುತ್ತೇವೆ. ಆದ್ದರಿಂದ ಕೃಷಿ ಚಟುವಟಿಕೆಗಳತ್ತ ಯುವ ಪೀಳಿಗೆ ಗಮನಹರಿಸಬೇಕು’ ಎಂದು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಜಯಶಂಕರ್ ಕಂಗಣ್ಣಾರು ಹೇಳಿದರು.

ಉದ್ಯಮಿ ಎರ್ಮಾಳು ಕಿಶೋರ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಉಪನ್ಯಾಸಕ ನಾಗರತ್ನ ರಾವ್ ದಂಪತಿ ಗದ್ದೆಗೆ ಹಾಲೆರೆಯುವ ಮೂಲಕ ನೇಜಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ಸುಮಾರು 400ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡಿದ್ದು, ಸಂತೋಷ್ ಶೆಟ್ಟಿ ಬಪ್ರಾಣಿ ಹಾಗೂ ಅಶೋಕ ಪೂಜಾರಿ ಅವರು ಮಕ್ಕಳಿಗೆ ನೇಜಿ ನಾಟಿ ವಿಧಾನವನ್ನು ತಿಳಿಸಿಕೊಟ್ಟರು.

ಬಳಿಕ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ಓಟ, ರಿಲೇ, ಹಗ್ಗ ಜಗ್ಗಾಟ, ನಿಧಿಶೋಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು. ಎರ್ಮಾಳು ಮೂಡುಬೆಟ್ಟು ಜಗನ್ನಾಥ ಶೆಟ್ಟಿ, ಎರ್ಮಾಳು ಗ್ರಾಮ ಪಂಚಾಯಿತಿ ಸದಸ್ಯೆ ಶಕುಂತಲಾ ಪೂಜಾರಿ, ಆದರ್ಶ ಯುವಕ ಮಂಡಲ ಅಧ್ಯಕ್ಷೆ ಪ್ರೇಮಾ ಆರ್.ಸಾಲ್ಯಾನ್, ಯೋಗ ಶಿಕ್ಷಕಿ ಶಾಮಲಾ ಆರ್.ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !