ಉಡುಪಿ ಕುಂದಾಪುರದಲ್ಲಿ ‘ಹೆಲಿಟೂರಿಸಂ’ ಆರಂಭ

7
ಪ್ರವಾಸಿ ತಾಣಗಳನ್ನು ಬಾನಿನಿಂದ ಕಣ್ತುಂಬಿಕೊಳ್ಳಲು ಅವಕಾಶ: ಇಂದಿನಿಂದ ಚಾಲನೆ

ಉಡುಪಿ ಕುಂದಾಪುರದಲ್ಲಿ ‘ಹೆಲಿಟೂರಿಸಂ’ ಆರಂಭ

Published:
Updated:
Prajavani

ಉಡುಪಿ: ಮಲ್ಪೆ ಬೀಚ್‌, ಸೇಂಟ್ ಮೇರಿಸ್‌ ಐಲ್ಯಾಂಡ್‌, ಶ್ರೀಕೃಷ್ಣ ಮಠ, ಗಂಗೊಳ್ಳಿ ಕಡಲ ಕಿನಾರೆ, ಪಶ್ಚಿಮ ಘಟ್ಟಗಳ ಸೌಂದರ್ಯ, ಹೀಗೆ ಉಡುಪಿ ಹಾಗೂ ಕುಂದಾಪುರದ ಪ್ರಸಿದ್ಧ ಪ್ರವಾಸಿತಾಣಗಳನ್ನು ಬಾನಿನಿಂದ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.

ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ಹಾಗೂ ಜಿಲ್ಲಾಡಳಿತ ಹೆಲಿಟೂರಿಸಂ ಆರಂಭಿಸಿದ್ದು, ಪ್ರವಾಸಿಗರು ಹೆಲಿಕಾಪ್ಟರ್ ಮೂಲಕ ಆಕಾಶದಲ್ಲಿ ಹಾರಾಡುತ್ತಾ ಪ್ರವಾಸಿತಾಣಗಳ ಸೌಂದರ್ಯ ಸವಿಯಬಹುದು.

ಹೆಲಿಟೂರಿಸಂಗೆ ಉಡುಪಿ ಹಾಗೂ ಕುಂದಾಪುರ ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಕೋಟೇಶ್ವರದ ಯುವ ಮೆರಿಡಿಯನ್‌ ಬೇ ರೆಸಾರ್ಟ್‌ನಿಂದ ಜ.4, 5 ಹಾಗೂ 6ರಂದು ಪ್ರವಾಸಿಗರು ಹೆಲಿಕಾಪ್ಟರ್ ರೈಡ್ ಮಾಡಬಹದು.

ಅದೇ ರೀತಿ ಜ.11, 12 ಹಾಗೂ 13ರಂದು ಆದಿ ಉಡುಪಿಯ ಎನ್‌ಸಿಸಿ ಗ್ರೌಂಡ್‌ನಿಂದ ಆಕಾಶಕ್ಕೆ ಹಾರಬಹುದು. ಜಾಯ್ ರೈಡ್ ಹಾಗೂ ಅಡ್ವೆಂಚರ್ ರೈಡ್‌ ಎಂಬ ಪ್ಯಾಕೇಜ್‌ಗಳಿದ್ದು, ಜಾಯ್‌ ರೈಡ್‌ 8 ನಿಮಿಷದ ಪ್ರಯಾಣವಾಗಿದ್ದು, ತಲಾ ₹ 2,500 ಪಾವತಿಸಬೇಕು. ಅಡ್ವೆಂಚರ್ ರೈಡ್‌ 10 ನಿಮಿಷದ ಪ್ರಯಾಣವಾಗಿದ್ದು, ತಲಾ ₹ 3000 ಪಾವತಿಸಬೇಕು. ಸಾಹಸಿ ಮನಸ್ಸುಗಳಿಗೆ ಅಡ್ವೆಂಚರ್ ರೈಡ್‌ ಖುಷಿ ಕೊಡಲಿದೆ.  

ಪ್ರತಿ ರೈಡ್‌ನಲ್ಲಿ 6 ಮಂದಿ ಕುಳಿತುಕೊಳ್ಳಬಹುದು. ಹೊಸ ವರ್ಷದ ರಜೆಯನ್ನು ಹೆಲಿಟೂರಿಸಂ ಮೂಲಕ ಅವಿಸ್ಮರಣೀಯಗೊಳಿಸಬಹುದು ಎನ್ನುತ್ತಾರೆ ಮಲ್ಪೆ ಬೀಚ್‌ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ಸುದೇಶ್ ಶೆಟ್ಟಿ.

ಮೂರು ವರ್ಷಗಳಿಂದ ಯಶಸ್ವಿಯಾಗಿ ಹೆಲಿ ಟೂರಿಸಂ ಆಯೋಜಿಸುತ್ತಿದ್ದೇವೆ. ಪ್ರತಿಭಾರಿಯೂ ಪ್ರವಾಸಿಗರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ. ಚಿಪ್ಸನ್‌ ಏವಿಯೇಷನ್‌ ಹೆಲಿಕಾಪ್ಟರ್‌ ಪ್ರವಾಸಿಗರಿಗೆ ಥ್ರಿಲ್ ನೀಡಲಿದೆ. ಅನುಭವಿ ಪೈಲಟ್‌ ರಮೇಶ್‌ ಗೋಪಿನಾಥ್‌ ಸಾರಥಿಯಾಗಿರಲಿದ್ದಾರೆ ಎಂದರು.

ಹೆಲಿಕಾಪ್ಟರ್‌ನಲ್ಲಿ ಹಾರಾಡಬೇಕು ಎಂಬ ಕನಸು ಬಹುತೇಕರಲ್ಲಿರುತ್ತೆ. ಆದರೆ, ಆರ್ಥಿಕ ಕಾರಣಗಳಿಂದಾಗಿ ಸಾಧ್ಯವಾಗಿರುವುದಿಲ್ಲ. ಪ್ರತ್ಯೇಕವಾಗಿ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿದ್ದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಆದರೆ, ಇಲ್ಲಿ ಕೇವಲ 2,500ಕ್ಕೆ ಕನಸು ನನಸಾಗಿಸಿಕೊಳ್ಳಬಹದು ಎನ್ನುತ್ತಾರೆ ಸುದೇಶ್‌.

ಒಂದೇ ದಿನದಲ್ಲಿ ಜಿಲ್ಲೆಯ ಪ್ರವಾಸೋದ್ಯಮವನ್ನು ಕಣ್ತುಂಬಿಕೊಳ್ಳಲಾಗುವುದಿಲ್ಲ. ಆದರೆ, ಹೆಲಿಟೂರಿಸಂನಲ್ಲಿ ಅದು ಸಾದ್ಯ. ಆಗಸದಿಂದ ಪ್ರಾಕೃತಿಕ ಸೌಂದರ್ಯವನ್ನು ಸವಿಯುವುದು ವರ್ಣಿಸಲಸಾಧ್ಯ. ಜೀವನದಲ್ಲಿ ಒಮ್ಮೆಯಾದರೂ ರೋಚಕ ಅನುಭವವನ್ನು ಪಡೆಯಬೇಕು ಎನ್ನುತ್ತಾರೆ ಅವರು.

ಪ್ರತಿದಿನ 30 ರೈಡ್‌ ಇರಲಿದೆ. ಪ್ರವಾಸಿಗರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡರೆ ಅನುಕೂಲ. ಬುಕ್ಕಿಂಗ್‌ಗಾಗಿ ಮೊಬೈಲ್‌: 9741248716, 9741249328 ಸಂಪರ್ಕಿಸಬಹುದು.

ಪ್ರವಾಸೋದ್ಯಮಕ್ಕೆ ಅವಕಾಶ
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಕ್ಕೆ ವಿಫುಲ ಅವಕಾಶಗಳಿದ್ದು, ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಕ್ಲಿಫ್‌ ಡೈವಿಂಗ್ ಶಿಬಿರ ಕೂಡ ಆಯೋಜಿಸಲಾಗುತ್ತಿದೆ. ಪ್ರವಾಸಿಗರಿಂದ ಬೇಡಿಕೆ ಹೆಚ್ಚಾದರೆ ಜಿಲ್ಲೆಯಲ್ಲಿ ಶಾಶ್ವತವಾಗಿ ಹೆಲಿಟೂರಿಸಂ ಮಾಡುವ ಉದ್ದೇಶವಿದೆ ಎನ್ನುತ್ತಾರೆ ಸುದೇಶ್‌ ಶೆಟ್ಟಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !