ಶನಿವಾರ, ಫೆಬ್ರವರಿ 27, 2021
30 °C
ಲಾಕ್‌ಡೌನ್‌ನಲ್ಲಿ ರೋಗಿಗಳ ಸಂಖ್ಯೆ ಇಳಿಮುಖ: ಹೆಚ್ಚಾದ ಹೆರಿಗೆ ಪ್ರಮಾಣ

ಕೊರೊನಾ ಕ್ಷೀಣ: ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದ್ವಿಗುಣ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ಗೂ ಮುನ್ನ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದ ರೋಗಿಗಳು, ಕೋವಿಡ್‌ ವ್ಯಾಪಕವಾದ ನಂತರ ಆಸ್ಪತ್ರೆಗಳತ್ತ ಮುಖ ಮಾಡುವುದನ್ನು ಕಡಿಮೆ ಮಾಡಿದ್ದರು. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆ, ಮತ್ತೆ ರೋಗಿಗಳು ಆಸ್ಪತ್ರೆ ಮೆಟ್ಟಿಲು ಹತ್ತುತ್ತಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. 

ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2019ರಲ್ಲಿ ಜಿಲ್ಲಾ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದವರು 1,86,382. ಒಳರೋಗಿಗಳು 9,661. ಕೋವಿಡ್‌ ಕಾಣಿಸಿಕೊಂಡ 2020ರಲ್ಲಿ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದವರು 1,06,447. ಒಳರೋಗಿಗಳು 6,369. 2019ಕ್ಕೆ ಹೋಲಿಸಿದರೆ 2020ರಲ್ಲಿ ಆಸ್ಪತ್ರೆಗೆ ಬಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾದ್ದು, ಹೊರರೋಗಿಗಳ ವಿಭಾಗದಲ್ಲಿ 79,935 ಹಾಗೂ ಒಳರೋಗಿ ವಿಭಾಗದಲ್ಲಿ 3,292 ರೋಗಿಗಳ ಸಂಖ್ಯೆ ಕಡಿಮೆಯಾಗಿದೆ.

2020ರ ಜನವರಿಯಲ್ಲಿ 16,296 (ಒಪಿಡಿ/ಐಪಿಡಿ), ಫೆಬ್ರುವರಿಯಲ್ಲಿ 15,003 ರೋಗಿಗಳು ಚಿಕಿತ್ಸೆ ಪಡೆದಿದ್ದರೆ, ಏಪ್ರಿಲ್‌ನಲ್ಲಿ 5,298ಕ್ಕೆ ಇಳಿಕೆಯಾಗಿದೆ. ಆಸ್ಪತ್ರೆಗೆ ಬರುವವರ ಸಂಖ್ಯೆ ಅಕ್ಟೋಬರ್‌ವರೆಗೂ ಕಡಿಮೆ ಇತ್ತು. ಇದೀಗ ಮತ್ತೆ ಹೆಚ್ಚಾಗುತ್ತಿದ್ದು, ಮೊದಲಿದ್ದ ಸ್ಥಿತಿ ನಿರ್ಮಾಣವಾಗುತ್ತಿದೆ. ಸಾರ್ವಜನಿಕರಲ್ಲಿ ಕೋವಿಡ್‌ ಬಗ್ಗೆ ಇದ್ದ ಅತಿಯಾದ ಭಯ, ಆಸ್ಪತ್ರೆಗೆ ಭೇಟಿನೀಡುವವರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಮಧುಸೂದನ್ ನಾಯಕ್‌.

ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದವರು ಕೋವಿಡ್‌ ಲಾಕ್‌ಡೌನ್ ಸಂದರ್ಭ ಮನೆಬಿಟ್ಟು ಹೊರಬರಲಿಲ್ಲ. ಹೆಚ್ಚಿನವರು ಮನೆ ಮದ್ದಿನಲ್ಲಿಯೇ ಗುಣವಾದರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು ಹಾಗೂ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದ್ದವರು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರಿಂದ ರೋಗಿಗಳ ಸಂಖ್ಯೆ ಕಡಿಮೆ ಇತ್ತು ಎನ್ನುತ್ತಾರೆ ವೈದ್ಯರು.

ಆದರೆ, ಜಿಲ್ಲೆಯಲ್ಲಿ ಕೋವಿಡ್‌ನಿಂದ ಹೆರಿಗೆಗಳ ಸಂಖ್ಯೆ ಇಳಿಮುಖವಾಗಿಲ್ಲ. ಹಿಂದಿನಂತೆಯೇ ಈಗಲೂ ಹೆರಿಗೆಗಳು ನಡೆಯುತ್ತಿವೆ. ಕೂಸಮ್ಮ ಶಂಭುಶೆಟ್ಟಿ ಮೊಮೊರಿಯಲ್‌ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2020ರ ಜನವರಿಯಲ್ಲಿ 341 ಹೆರಿಗೆಗಳಾಗಿದ್ದು, ಏಪ್ರಿಲ್‌ನಲ್ಲಿ 416 ಹೆರಿಗೆಗಳು ನಡೆದಿವೆ. ಹೆರಿಗೆ ಪ್ರಮಾಣದಲ್ಲಿ ಏರಿಕೆಯಾಗಿದೆಯೇ ಹೊರತು ಇಳಿಮುಖವಾಗಿಲ್ಲ ಎಂದು ಅಂಕಿಅಂಶಗಳ ಸಹಿತ ಮಾಹಿತಿ ನೀಡಿದರು ಸರ್ಜನ್‌ ಡಾ.ಮಧುಸೂದನ್ ನಾಯಕ್‌.

ಅಗತ್ಯ ಮುನ್ನೆಚ್ಚರಿಕೆ

ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲುವ ಅಪಾಯ ಹೆಚ್ಚಾಗಿದ್ದರಿಂದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವಾಗ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿತ್ತು. ಜತೆಗೆ, ರೋಗಿಯ ಜತೆಗೆ ಒಬ್ಬರಿಗೆ ಮಾತ್ರ ಆಸ್ಪತ್ರೆ ಪ್ರವೇಶಿಸಲು ಅನುಮತಿಸಲಾಗಿತ್ತು.

ಗರ್ಭಿಣಿಯರ ವಾರ್ಡ್‌ಗಳ ಶುಚಿತ್ವಕ್ಕೆ ಒತ್ತು ನೀಡಲಾಗಿತ್ತು. ವೈದ್ಯರು, ಶುಶ್ರೂಷಕರು ಕಡ್ಡಾಯವಾಗಿ ಸುರಕ್ಷತಾ ಸಾಧನಗಳೊಂದಿಗೆ ಹೆರಿಗೆ ವಾರ್ಡ್‌ ಪ್ರವೇಶಕ್ಕೆ ಸೂಚನೆ ನೀಡಲಾಗಿತ್ತು. ಪರಿಣಾಮ ಸಮಸ್ಯೆಗಳು ಎದುರಾಗಲಿಲ್ಲ ಎಂದು ಸೋಂಕು ಹರಡದಂತೆ ತೆಗೆದುಕೊಂಡ ಕ್ರಮಗಳ ಕುರಿತು ವಿವರ ನೀಡಿದರು.

124 ಬೆಡ್‌ಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ತಾತ್ಕಾಲಿಕವಾಗಿ ಹೆಚ್ಚುವರಿ ಬೆಡ್‌ಗಳನ್ನು ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಂದವರು ಚಿಕಿತ್ಸೆ ಸಿಗದೆ ಮರಳಬಾರದು ಎಂಬುದು ಇದರ ಉದ್ದೇಶ. ಸಧ್ಯ, ಐಸಿಯು, ಡಯಾಲಿಸಿಸ್‌, ಶಸ್ತ್ರಚಿಕಿತ್ಸೆ, ಹಿರಿಯ ನಾಗರಿಕರ ವಾರ್ಡ್‌, ತುರ್ತು ಚಿಕಿತ್ಸಾ ವಾರ್ಡ್‌, ಬರ್ನ್ಸ್‌ ವಾರ್ಡ್‌ ಸೌಲಭ್ಯಗಳು ದೊರೆಯುತ್ತಿವೆ. ಎಂಆರ್‌ಐ ಸೌಲಭ್ಯ ಕೂಡ ಆರಂಭವಾಗುತ್ತಿದ್ದು, ಶೀಘ್ರ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದರು.

‘ಶ್ರೀಮಂತರಿಗೂ ನೆನಪಾದ ಜಿಲ್ಲಾ ಆಸ್ಪತ್ರೆ’

ಕೋವಿಡ್ ವ್ಯಾಪಕವಾಗಿದ್ದ ಮೂರ್ನಾಲ್ಕು ತಿಂಗಳು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದರೂ, ಜಿಲ್ಲಾ ಆಸ್ಪತ್ರೆ ಯಾರಿಗೂ ಚಿಕಿತ್ಸೆ ನಿರಾಕರಿಸಲಿಲ್ಲ. ಕೋವಿಡ್‌ಗೂ ಮುನ್ನ ಬಡವರು, ಮಧ್ಯಮ ವರ್ಗದವರು ಮಾತ್ರ ಸರ್ಕಾರಿ ಆಸ್ಪತ್ರೆಗಳಿಗೆ  ಬರುತ್ತಿದ್ದರು. ಕೋವಿಡ್‌ ನಂತರ ಶ್ರೀಮಂತರಿಗೂ ಜಿಲ್ಲಾ ಆಸ್ಪತ್ರೆ ನೆನಪಾಗುವಂತಾಯಿತು. ದುಬೈ, ಕತಾರ್‌ ಸೇರಿದಂತೆ ವಿದೇಶಗಳಲ್ಲಿ ದುಡಿಯುತ್ತಿದ್ದವರು ತವರಿಗೆ ಮರಳಿದಾಗ, ಸಂಬಂಧಿಗಳು ಮನೆಗೆ ಸೇರಿಸಿಕೊಳ್ಳಲಿಲ್ಲ. ಹಲವರು ಜಿಲ್ಲಾ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌ನಲ್ಲಿ 14 ದಿನ ಕ್ವಾರಂಟೈನ್ ಅವಧಿ ಕಳೆದು, ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕ ಮನೆಗೆ ಮರಳಿದರು ಎಂದರು ಸರ್ಜನ್ ಮಧುಸೂದನ್ ನಾಯಕ್‌.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಬಿಆರ್‌ಎಸ್‌) ಹೆರಿಗೆ– 2020

ಜನವರಿ–341

ಫೆಬ್ರುವರಿ–328

ಮಾರ್ಚ್‌–375

ಏಪ್ರಿಲ್‌–416

ಮೇ–375

ಜೂನ್‌–395

ಜುಲೈ–335

ಆಗಸ್ಟ್‌–400

ಸೆಪ್ಟೆಂಬರ್‌–386

ಅಕ್ಟೋಬರ್‌–448

ನವೆಂಬರ್‌–393

ಡಿಸೆಂಬರ್–357

ಒಟ್ಟು–4,549

––––––––––––

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು (2020)

ತಿಂಗಳು–ಹೊರರೋಗಿ ವಿಭಾಗ–ಒಳರೋಗಿ ವಿಭಾಗ

ಜನವರಿ–15,447–849

ಫೆಬ್ರುವರಿ–14,228–775

ಮಾರ್ಚ್‌–10,772–554

ಏಪ್ರಿಲ್‌–4,952–346

ಮೇ–6,599–471

ಜೂನ್‌–6,394–436

ಜುಲೈ–6,169–404

ಆಗಸ್ಟ್‌–5,908–431

ಸೆಪ್ಟೆಂಬರ್‌–7,686–509

ಅಕ್ಟೋಬರ್‌–7,166–526

ನವೆಂಬರ್‌–9,856–490

ಡಿಸೆಂಬರ್–11,270–578

ಒಟ್ಟು–1,06,447–6,369

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು