ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಪು: ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮ

Published 9 ಮೇ 2023, 16:09 IST
Last Updated 9 ಮೇ 2023, 16:09 IST
ಅಕ್ಷರ ಗಾತ್ರ

ಕಾಪು(ಪಡುಬಿದ್ರಿ): ‘ಭಾರತದಲ್ಲಿ ಬಸವಣ್ಣನಂತಹ ದಾರ್ಶನಿಕರು ದೇವರು ಮತ್ತು ಮನುಷ್ಯನಿಗೆ ನೇರವಾಗಿ ಸಂಬಂಧವಿದೆ ಎಂದು ಮೊದಲ ಬಾರಿಗೆ ತಿಳಿಸಿದ್ದರು’ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಟೀವನ್ ಕ್ವಾಡ್ರಸ್ ಹೇಳಿದರು.

ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು–ಕಾಪು ತಾಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನಕಾರರು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವಚನಗಳು ಸಾಹಿತ್ಯದಲ್ಲಿ ಶ್ರೇಷ್ಠವಾಗಿದೆ. ರಾಜ್ಯದ ಶ್ರೀಮಂತಿಕೆ, ಪ್ರಕೃತಿ ಸೊಬಗನ್ನು ಕೆ.ಎಸ್. ನಿಸಾರ್ ಅಹಮದ್ ಅವರಂತಹ ಕವಿಗಳು ಪದ್ಯದ ಮೂಲಕ ಜಗತ್ತಿಗೆ ಸಾರಿದ್ದಾರೆ. ದೇವರು ಕೇಂದ್ರಿತ ನೃತ್ಯಗಳಲ್ಲಿ ತುಳುನಾಡಿನ ಕಂಗೀಲು, ಉತ್ತರ ಕನ್ನಡದ ವೀರಭದ್ರ ಕುಣಿತ, ಕಂಸಾಳೆ ಮುಂತಾದ ಜಾನಪದ ನೃತ್ಯ ಪ್ರಾಕಾರಗಳು ಮನುಷ್ಯ ಮತ್ತು ದೇವರಿಗೆ ಸಂಬಂಧಿತ ನೃತ್ಯಗಳಾಗಿವೆ’ ಎಂದು ಅವರು ಹೇಳಿದರು.

ಕನ್ನಡ ಉಪನ್ಯಾಸ ಪ್ರೊ.ಎ.ಆರ್.ನಾಯ್ಕ್ ಮಾತನಾಡಿ, ‘ತನ್ನೆಲ್ಲ ಸರ್ವಸ್ವ ಧಾರೆಯೆರೆದು ದಾಸನಾಗಿ ಎಲ್ಲಾ ವರ್ಗದ ಜನರ ಒಡನಾಟ ಮಾಡಿ ತನ್ನ ಅನುಭವಗಳನ್ನು ಕೀರ್ತನೆಗಳ ಮೂಲಕ ಪುರಂದರದಾಸರು ಜನರಿಗೆ ತಿಳಿಸಿದರು. ವರ್ತನೆಯಲ್ಲಿ ಪರಿವರ್ತನೆ ಮಾಡಿದಾಗ ಮನುಷ್ಯನಾಗಬಹುದು’ ಎಂದರು.

ಶೈಕ್ಷಣಿಕ ಸಲಹೆಗಾರ ಡಾ. ಗೋಪಾಲಕೃಷ್ಣ ಗಾಂವ್ಕರ್ ಮಾತನಾಡಿ, ಬಯಲಾಟವು ಉತ್ತರ ಕರ್ನಾಟಕದಲ್ಲಿ ಜಾನಪದ ಕಲೆಯಾಗಿ ಕನ್ನಡ ಭಾಷೆಯಲ್ಲಿ ನೀತಿ ನಿಯಮ, ಹೊಸ ವಿಷಯಗಳನ್ನು ಜನರಿಗೆ ಮುಟ್ಟಿಸುವ ಮಾಧ್ಯಮವಾಗಿದೆ. ನಮ್ಮ ಸುತ್ತ ಮುತ್ತಲಿನ ಘಟನಾವಳಿಗಳು ಕನ್ನಡದಲ್ಲಿರುತ್ತದೆ. ಅದನ್ನು ನಾವು ಅರಗಿಸಿಕೊಳ್ಳುವ ತಾಕತ್ತು ನಮಗೆ ಬಂದಾಗ ನಾವು ಬೇರೆ ಭಾಷೆ, ವ್ಯವಸ್ಥೆಯಲ್ಲಿ ಮಾತನಾಡಲು ಸಾಧ್ಯ’ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ‘ಆಶಯ ನುಡಿಗಳಲ್ಲಿ ಕನ್ನಡ ನಾಡು ನುಡಿ ಪರಂಪರೆ’, ದತ್ತಿ ಉಪನ್ಯಾಸದ ಮಹತ್ವದ ಬಗ್ಗೆ ತಿಳಿಸಿದರು.

ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ. ರೋಶ್ನಿ ಯಶ್ವಂತ್, ಜಿಲ್ಲಾ ಘಟಕದ ನರಸಿಂಹ ಮೂರ್ತಿ ರಾವ್, ಕಸಾಪ ಕಾಪು ಘಟಕದ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್, ಕೃಷ್ಣಕುಮಾರ್ ರಾವ್, ಮಧುಕರ ಎಸ್.ಯು, ದೀಪಕ್ ಬೀರ ಇದ್ದರು.

ಗಾಯಕ ಡಾ. ಗಣೇಶ್ ಗಂಗೊಳ್ಳಿಯವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಕಸಾಪ ಕಾಪು ಘಟಕದ ಸದಸ್ಯ ರಾಕೇಶ್ ಕುಂಜೂರು ಸ್ವಾಗತಿಸಿದರು. ಕಾರ್ಯದರ್ಶಿ ನೀಲಾನಂದ ನಾಯ್ಕ ವಂದಿಸಿದರು. ಎಸ್.ಎಸ್. ಪ್ರಸಾದ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT