ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡರ ಆಡಳಿತ ಮಾದರಿಯಾಗಲಿ

ಹಿರಿಯಡ್ಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ
Last Updated 27 ಜೂನ್ 2019, 17:31 IST
ಅಕ್ಷರ ಗಾತ್ರ

ಉಡುಪಿ: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಕೆರೆ-ಕಟ್ಟೆಗಳು ಪರಿಸರ ರಕ್ಷಣೆಗೆ ಎಲ್ಲರಿಗೂ ಮಾದರಿ. ಕೆಂಪೇಗೌಡರ ನಗರ ನಿರ್ಮಾಣ ಯೋಜನೆಯನ್ನು ಪ್ರಸ್ತುತ ಅನುಪ್ಠಾನನಕ್ಕೆ ತರುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಒಕ್ಕಲಿಗರ(ಗೌಡ) ಸೇವಾ ಸಂಘದ ಆಶ್ರಯದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ನಗರ ನಿರ್ಮಾಣ ಯೋಜನೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ ನಾಡಿಗೆ ಮಾದರಿಯಾಗುವಂಥದ್ದು. ಎಲ್ಲ ನಗರಗಳಲ್ಲಿ ಅವರ ದೂರದೃಷ್ಟಿತ್ವದ ಯೋಜನೆಗಳು ಜಾರಿಯಾಗಬೇಕು ಎಂದರು.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸರ್ಕಾರದ ಜತೆಗೂಡಿ ವಿವಿಧ ಸಂಘ–ಸಂಸ್ಥೆಗಳು ನದಿಪಾತ್ರದಲ್ಲಿ ಹೂಳೆತ್ತುವ ಕಾರ್ಯ ಮಾಡುವ ಮೂಲಕ ಪರಿಸರ ಉಳಿಸುವ ಕೆಲಸ ನಡೆಯಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ದೇಶದ ಪರಂಪರೆ, ಸಂಸ್ಕೃತಿ ಉಳಿಸಲು ಶ್ರಮಿಸಿದ ನಾಡಿಗಾಗಿ ದುಡಿದವರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ದೇಶ ಪ್ರೇಮ ಬೆಳೆಯಲು ಮಹಾತ್ಮರ ಜಯಂತಿಗಳು ಅವಶ್ಯ ಎಂದರು.

ನಾಡಿಗಾಗಿ ಸೇವೆ ಸಲ್ಲಿಸಿ, 9 ಕೋಟೆಗಳನ್ನು ಕಟ್ಟಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬದುಕಿನಲ್ಲಿ ಕೆಂಪೇಗೌಡರ ಆದರ್ಶಗಳನ್ನು, ಒಳ್ಳೆಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯತ್‌ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್ ಮಾತನಾಡಿ, ಕೆಂಪೇಗೌಡರು ಸಮಾಜಕ್ಕೆ ಆದರ್ಶಪ್ರಾಯ. ಅವರ ಆದರ್ಶಗಳನ್ನು ಜೀವನದಲ್ಲಿಯೂ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಡಬೇಕು ಎಂದರು.

ಉಡುಪಿ ಜಿಲ್ಲಾ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸಿದ್ದರಾಜು ಗೌಡ ಮಾತನಾಡಿ, ಮುಂದಿನ ಪೀಳಿಗೆ ಬದುಕಲು, ಆಡಳಿತ ನಡೆಸಲು ಭದ್ರ ಬುನಾದಿ ಹಾಕಿ ಕೊಟ್ಟವರು ಕೆಂಪೇಗೌಡರು. ನೀರಿನ ಅವಶ್ಯಕತೆ ಅರಿತು ಕೆರೆಗಳ ನಿರ್ಮಾಣಕ್ಕೆ ಒತ್ತು ನೀಡಿದವರು.ರಾಜ್ಯದ ಆಡಳಿತ ಹೇಗಿರಬೇಕು ಎಂಬುದಕ್ಕೆ ಕೆಂಪೇಗೌಡರ ಆಡಳಿತ ಮಾದರಿ ಎಂದು ಹೇಳಿದರು.

ಹಿರಿಯಡ್ಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಉಪನ್ಯಾಸ ನೀಡಿ, ಕೆಂಪೇಗೌಡರು ನಗರ ನಿರ್ಮಿಸಲು ನಿರ್ಣಯಿಸಿದಾಗ ಅದಕ್ಕಾಗಿ ಸೂಕ್ತ ನೀತಿ, ಯೋಜನೆಗಳನ್ನು ತಯಾರಿಸಿದ್ದರು. ನಗರಗಳು ಮಹಾನಗರಗಳಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಯಾವ ನೀತಿ, ಯೋಜನೆಗಳಿಗೂ ಮಹತ್ವ ನೀಡಲಾಗುತ್ತಿಲ್ಲ ಎಂದರು.

ನಗರದಲ್ಲಿ ವಾಸಿಸುವ ಜನರ ಅವಶ್ಯಕತೆಗಳನ್ನು ಅರಿತು ಕೋಟೆ, ಕೆರೆಗಳೊಂದಿಗೆ ಪೇಟೆಗಳನ್ನು ನಿರ್ಮಾಣ ಮಾಡಿದವರು ಕೆಂಪೇಗೌಡರು. ಎಲ್ಲಾ ವರ್ಗದ ಜನರಿಗೂ ಬದುಕಲು ಅನುಕೂಲವಾಗುವಂತೆ ವಿವಿಧತೆಯಲ್ಲಿ ಏಕತೆ ಎಂಬಂತೆ ನಗರ ನಿರ್ಮಿಸಿದ್ದರು.

ಕೆಂಪೇಗೌಡರ ದಕ್ಷ ಆಡಳಿತ, ತೆರಿಗೆ ನೀತಿ, ವೃತ್ತಿಆಧಾರಿತ ಸುಂಕದ ವ್ಯವಸ್ಥೆ ಅನುಕರಣೀಯ. ಸರ್ವ ಸಮಾನತೆಯ ನಗರ ನಿರ್ಮಿಸಿದ ಅವರ ಆಡಳಿತ ಶ್ಲಾಘನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್ ಸ್ವಾಗತಿಸಿದರು. ಇನ್‌ಸ್ಪೆಕ್ಟರ್ ಸಂಪತ್‌ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್, ಸರ್ಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಯಾದವ್‌ ಕರ್ಕೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT