ಕೋಟ (ಬ್ರಹ್ಮಾವರ): ಕಳೆದೆರಡು ದಿನಗಳಿಂದ ಬ್ರಹ್ಮಾವರ, ಕೋಟ ಪರಿಸರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ ನದಿಗಳು ಉಕ್ಕಿಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ. ಇನ್ನೊಂದೆಡೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತೋಡ್ಕಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯಿಂದ ಅಡ್ಡಲಾಗಿ ಹಾಕಲಾದ ಮಣ್ಣು ತೆರವುಗೊಳಿಸದ ಹಿನ್ನೆಲೆಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ನೆರೆ ಆವೃತವಾಗಿದೆ.
ಘಟ್ಟಪ್ರದೇಶದಲ್ಲೂ ನಿರಂತರ ಮಳೆಯಾದ ಕಾರಣ ಬ್ರಹ್ಮಾವರ ಪರಿಸರದ ಮಡಿಸಾಲು ಮತ್ತು ಸೀತಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಬಹುತೇಕ ತಗ್ಗು ಪ್ರದೇಶದಲ್ಲಿ ಪ್ರವಾಹದ ನೀರು ನುಗ್ಗಿದೆ. ಗುರುವಾರ ಮಧ್ಯಾಹ್ನದ ನಂತರ ಮಳೆಯ ಬಿರುಸು ಕಡಿಮೆಯಾಗಿದ್ದರೂ, ಈ ಎರಡೂ ಪ್ರವಾಹ ಏರಿಕೆ ಕಂಡಿದೆ. ಉಪ್ಪೂರು, ಆರೂರು, ಬೆಳ್ಮಾರು, ಮಟಪಾಡಿ, ಹಂದಾಡಿ, ಬಾರ್ಕೂರು, ಬಂಡೀಮಠ, ಬಾವಲಿಕುದ್ರು, ಪ್ರದೇಶದಲ್ಲಿ ಪ್ರವಾಹದಿಂದ ಕೃಷಿ ಭೂಮಿ ಜಲಾವೃತಗೊಂಡಿದೆ. ಬ್ರಹ್ಮಾವರ ಕೋಟ ಪರಿಸರದಲ್ಲಿ ಹೆಚ್ಚಿನ ಕಡೆ ಮಳೆನೆರೆಯಿಂದ ವಾಹನ ಸಂಚಾರಕ್ಕೂ ಅಡಚಣೆಯಾದ ಬಗ್ಗೆ ವರದಿಯಾಗಿದೆ.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತೋಡ್ಕಟ್ಟುವಿನಲ್ಲಿ ಕಳೆದ ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಸೇತುವೆ ಕಾಮಗಾರಿಯಿಂದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ನೆರೆ ಕಾಣಿಸಿಕೊಂಡಿದೆ. ನೆರೆಯಿಂದ ಭತ್ತದ ಕೃಷಿ ಭೂಮಿ ಜಲಾವೃತಗೊಂಡ ಕೋಟ, ಸಾಲಿಗ್ರಾಮ ಇತರ ಭಾಗಗಳಿಗೆ ತಹಶೀಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಗುತ್ತಿಗೆದಾರರು, ಇಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಕೃಷಿಭೂಮಿ ಹಾನಿ ಪ್ರದೇಶಗಳಿಗೂ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.