ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದ ಜಾಹೀರಾತು ಜನರ ದಾರಿ ತಪ್ಪಿಸುತ್ತಿದೆ- ಈಶ ವಿಠಲದಾಸ ಸ್ವಾಮೀಜಿ

ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಧಾರ್ಮಿಕ ಸಭೆ
Published 23 ಏಪ್ರಿಲ್ 2024, 15:25 IST
Last Updated 23 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಕುಂದಾಪುರ: ಮೋಸದ ಜಾಹೀರಾತುಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸಗಳು ನಿರಂತರವಾಗಿವೆ. ಮಾತೃ ಭಾಷೆ, ಕನ್ನಡ ಮಾಧ್ಯಮಗಳ ಕುರಿತಾದ ಕೀಳರಿಮೆ ದೂರ ಮಾಡಬೇಕು. ನಮ್ಮದು ಎನ್ನುವುದನ್ನು ಹೆಮ್ಮೆಯಿಂದ ಹೇಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದ ಶಿಲಾಮಯ ದೇಗುಲ ಲೋಕಾರ್ಪಣೆ, ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಸೋಮವಾರ ಸಂಜೆ ದೇವಸ್ಥಾನದ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಜ್ಯೋತಿಷಿ ಕಬಿಯಾಡಿ ಜಯರಾಮ ಆಚಾರ್ಯ ಮಾತನಾಡಿ, ನಿಷ್ಕಲ್ಮಶ ಪ್ರೀತಿಯಿಂದ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು. ದೇವಾಲಯ ಜೀರ್ಣೋದ್ಧಾರಗೊಂಡರೆ ಊರು ಅಭಿವೃದ್ಧಿಗೊಂಡಂತೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೋಟ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ್‌ ಸಿ.ಕುಂದರ್ ಮಾತನಾಡಿ, ಜೀರ್ಣಾವಸ್ಥೆಯಲ್ಲಿದ್ದ ದೇವಾಲಯ ಶಿಲಾನ್ಯಾಸ ಮಾಡುವುದು ಸುಲಭದ ಮಾತಲ್ಲ. ಸೀಮಿತ ಅವಧಿಯಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಬೇಕಾದ ಜವಾಬ್ದಾರಿ ಸಮಿತಿ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಲಕ್ಷ್ಮೀನಾರಾಯಣ ದೇಗುಲ ಅಲ್ಪ ಅವಧಿಯಲ್ಲಿ ದಾನಿಗಳು, ಊರವರ ಸಹಕಾರದಿಂದ ಶಿಲಾಮಯಗೊಂಡಿರುವುದು ಸಾರ್ಥಕ ಮನೋಭಾವ ಮೂಡಿಸಿದೆ ಎಂದರು.

ಪಂಚಾಂಗಕರ್ತ ಹಾಲಾಡಿ ತಟ್ಟವಟ್ಟು ವಾಸುದೇವ ಜೋಯಿಸ ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಎನ್.ಟಿ.ಪೂಜಾರಿ ಗುಜ್ಜಾಡಿ, ಡಾ.ಎಂ.ಅಣ್ಣಯ್ಯ ಕುಲಾಲ್, ಜಿಲ್ಲಾ ಸಿವಿಲ್ ಡಿಫೆನ್ಸ್ ಮುಖ್ಯ ವಾರ್ಡನ್ ವಿಜಯೇಂದ್ರ ರಾವ್, ಕನಕ ಗ್ರೂಪ್ಸ್‌ನ ಚೇರಮನ್ ಜಗದೀಶ ಶೆಟ್ಟಿ ಕುದ್ರುಕೋಡು, ನಗು ಗ್ರೂಪ್ಸ್‌ನ ಆಡಳಿತ ನಿರ್ದೇಶಕ ಕುಶಲ ಶೆಟ್ಟಿ, ವಕೀಲ ಟಿ.ಬಿ. ಶೆಟ್ಟಿ , ಶಿಲ್ಪಿ ಜಾರ್ಕಳ ನಾಗರಾಜ್ ತಂತ್ರಿ, ಲಕ್ಷ್ಮೀನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ, ಬ್ರಹ್ಮ ಕುಂಭಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಜತೆ ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿ ಇದ್ದರು.

ದಾನಿಗಳು, ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಕೆ.ಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ದಾಮೋದರ ಶರ್ಮಾ ನಿರೂಪಿಸಿದರು. ಶ್ರೀಕಾಂತ ಎಚ್ ವಂದಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ನಡೆಯಿತು.

‘ಕನ್ನಡ ಶಾಲೆಗಳ ಉಳಿವಿಗೆ ಮುಂದೆಬನ್ನಿ’

ದೇವಸ್ಥಾನ ಮಠ-ಮಂದಿರಗಳಿಂದ ಧರ್ಮ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಧರ್ಮ ಉಳಿದರೆ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ. ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವುದರಿಂದ ದೊರಕುವ ಪುಣ್ಯ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದುಕೊಂಡು ಮುನ್ನೇಡೆಸುವುದರಿಂದಲೂ ದೊರಕುತ್ತದೆ. ಕನ್ನಡ ಶಾಲೆಗಳ ಉಳಿವಿಗೆ ದಾನಿಗಳು ಮುಂದೆ ಬರಬೇಕು ಎಂದು ಈಶವಿಠಲದಾಸ ಸ್ವಾಮೀಜಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT