ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಶಿವನ ದೇವಸ್ಥಾನಗಳಲ್ಲಿ ಭಕ್ತರ ದಂಡು: ಶಿವರಾತ್ರಿಯ ಸಂಭ್ರಮಾಚರಣೆ

Published 8 ಮಾರ್ಚ್ 2024, 14:19 IST
Last Updated 8 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಕುಂದಾಪುರ: ಶಿವರಾತ್ರಿ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಶಿವ ಹಾಗೂ ಶಂಕರನಾರಾಯಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ–ಹವನ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ಕುಂದಾಪುರದ ಕುಂದೇಶ್ವರ, ಮೈಲಾರೇಶ್ವರ, ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ, ಕೋಟೇಶ್ವರದ ಕೋಟಿಲಿಂಗೇಶ್ವರ, ಕುಂಭಾಶಿಯ ಹರಿ-ಹರ, ಹಟ್ಟಿಯಂಗಡಿಯ ಲೋಕನಾಥೇಶ್ವರ, ಗುಜ್ಜಾಡಿಯ ಗುಹೇಶ್ವರ, ಬೇಳೂರು ಹಂದಟ್ಟಿನ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ವಿವಿಧ ಶಿವ ದೇಗುಲದಲ್ಲಿ ಶಿವರಾತ್ರಿ ಆಚರಣೆಯ ಅಂಗವಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.

ಹಬ್ಬದ ಅಂಗವಾಗಿ ದೇಗುಲಗಳನ್ನು ಹೂವು, ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಪ್ರಸಾದ ವಿತರಣೆ, ಸೇವೆ ಹಾಗೂ ದರ್ಶನದಲ್ಲಿ ನೂಕುನುಗ್ಗಲು ಆಗದಂತೆ ಕ್ರಮ ಕೈಗೊಳ್ಳಲಾಗಿತ್ತು.

ಪಂಚ ಶಂಕರನಾರಾಯಣ ಯಾತ್ರೆ: ಪರಶುರಾಮ ಸೃಷ್ಟಿಯ ಮೋಕ್ಷದಾಯಕ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಶಂಕರನಾರಾಯಣದ ಕ್ರೋಢ ಶಂಕರನಾರಾಯಣ ದೇವಸ್ಥಾನವೂ ಸೇರಿದಂತೆ ಸಿದ್ಧಾಪುರ ಸಮೀಪದ ಹೊಳೆ ಶಂಕರನಾರಾಯಣ, ಅಮಾಸೆಬೈಲು ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ ಹಾಗೂ ಆವರ್ಸೆ ಶಂಕರನಾರಾಯಣ ದೇವಸ್ಥಾನಗಳಿಗೆ ಶಿವರಾತ್ರಿಯಂದು ತೆರಳಿ ಶಂಕರನಾರಾಯಣ ದೇವರ ದರ್ಶನ ಮಾಡಿದರೇ ಕಾಶಿ ಯಾತ್ರೆಯ ಪುಣ್ಯ ದೊರಕುತ್ತದೆ ಎನ್ನುವ ನಂಬಿಕೆಯಿಂದ ಜನರು ಪಂಚ ಶಂಕರನಾರಾಯಣ ಕ್ಷೇತ್ರಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡರು.

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರಾದ ಎ.ಕಿರಣಕುಮಾರ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಶಿವ ದೇಗುಲಕ್ಕೆ ಬರುವ ಭಕ್ತರಿಗೆ ತಂಪು ಪಾನೀಯ,‌ ಪಾನಕ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಭಜನೆ, ಸಂಕೀರ್ತನೆ, ಯಕ್ಷಗಾನ, ನಾಟಕ, ಸುಗಮ ಸಂಗೀತ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT