ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಾಪುರ: ತಾಯಿಯೊಂದಿಗೆ ಬಾವಿಗೆ ಬಿದ್ದ ಮಕ್ಕಳಿಬ್ಬರ ಸಾವು

Published 29 ಜೂನ್ 2024, 16:23 IST
Last Updated 29 ಜೂನ್ 2024, 16:23 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಬೆಳ್ಳಾಲ ಗ್ರಾಮದ ಹೊಟ್ನಬೈಲು ಎಂಬಲ್ಲಿ ಆವರಣವಿಲ್ಲದ ಬಾವಿಗೆ ಬಿದ್ದು, ಇಬ್ಬರು ಮಕ್ಕಳು ಮೃತಪಟ್ಟು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿದ ಘಟನೆ ಶನಿವಾರ ನಡೆದಿದೆ.

ಮೃತಪಟ್ಟವರನ್ನು ಧೀರಜ್‌ (13) ಹಾಗೂ ಛಾಯಾ (8) ಎಂದು ಗುರುತಿಸಲಾಗಿದೆ. ತಾಯಿ ಶೀಲಾ (43) ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆಗಾಗಿ  ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಮನೆಯ ಸಮೀಪದ ಗದ್ದೆಯಲ್ಲಿನ ಬಾವಿಗೆ ಮಕ್ಕಳೊಂದಿಗೆ ತಾಯಿಯೂ ಬಿದ್ದಿದ್ದರು. ಮಾಹಿತಿ ಅರಿತ ಸ್ಥಳೀಯರು ರಕ್ಷಣೆಗೆ ಧಾವಿಸಿ, ಮೂವರನ್ನೂ ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ, ಇಬ್ಬರು ಮಕ್ಕಳು ಬದುಕುಳಿಯಲಿಲ್ಲ.

ನೀರು ಕುಡಿದು ಗಂಭೀರ ಸ್ಥಿತಿಯಲ್ಲಿದ್ದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಕ್ಕಳ ಸಹಿತ ತಾಯಿ ಆಕಸ್ಮಿಕವಾಗಿ ಬಾವಿಗೆ ಬಿದ್ದರೇ ಅಥವಾ ಮಕ್ಕಳೊಂದಿಗೆ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿದ್ದರೇ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ  ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಾಲೆಗೆ ತೆರಳಿದ್ದ ಮಕ್ಕಳು ಶನಿವಾರ ಮಧ್ಯಾಹ್ನದ ನಂತರ ರಜೆ ಇದ್ದುದರಿಂದ ಮನೆಗೆ ಮರಳಿದ್ದರು ಎಂದು ಸ್ಥಳೀಯ ಕೆಲವರು ಹೇಳುತ್ತಿದ್ದು, ಈ ಕುರಿತಂತೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ.

ಘಟನಾ ಸ್ಥಳಕ್ಕೆ ಕೊಲ್ಲೂರು ಠಾಣೆಯ ಎಸ್‌.ಐ. ಜಯಶ್ರೀ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಯು.ಡಿ.ಆರ್‌. ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT