ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ವಿರುದ್ಧವಲ್ಲ; ಪಕ್ಷಾಂತರಿಯ ವಿರುದ್ಧ ಸ್ಪರ್ಧೆ

ನೈರುತ್ಯ ಪದವೀದರರ ಕ್ಷೇತ್ರದ ಪಕ್ಷೇತ್ತರ ಅಭ್ಯರ್ಥಿ ಎಸ್‌.ಪಿ.ದಿನೇಶ್
Published 29 ಮೇ 2024, 15:47 IST
Last Updated 29 ಮೇ 2024, 15:47 IST
ಅಕ್ಷರ ಗಾತ್ರ

ಉಡುಪಿ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಾಗೂ ಮತದಾರರ ಬೆಂಬಲಿತ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯುತ್ತಿದ್ದು, ಮತದಾರರು ಆಶೀರ್ವದಿಸುವ ವಿಶ್ವಾಸವಿದೆ’ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್‌.ಪಿ. ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಪಕ್ಷಾಂತರಕ್ಕೆ ಹೆಸರುವಾಸಿಯಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ವಿಜಯ ಮಲ್ಯನ ಪಕ್ಷವನ್ನೂ ಸೇರಿ ಇದೀಗ ಕೊನೆಯ ನಿಲ್ದಾಣ ಎಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ವಿರುದ್ಧ ಏಕವಚನದಲ್ಲಿ ತುಚ್ಛವಾಗಿ ವಾಗ್ದಾಳಿ ನಡೆಸಿದ್ದ ಆರ್‌ಎಸ್‌ಎಸ್‌ ಹಿನ್ನೆಲೆಯ ವ್ಯಕ್ತಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿರುವುದ ಆ ಪಕ್ಷದ ದುರಂತ ಎಂದು ವಾಗ್ದಾಳಿ ನಡೆಸಿದರು.

ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರಾದ ರಣದೀಪ್‌ ಸುರ್ಜೆವಾಲಾ ಹಾಗೂ ಮಯೂರ್‌ ಜಯಕುಮಾರ್‌ ಮನವಿ ಮಾಡಿದ್ದರು. ಪಕ್ಷಾಂತರಿಗಳ ಬದಲಿಗೆ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಿದರೆ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ. ಜತೆಗೆ, ಚುನಾವಣಾ ಪೂರ್ವಭಾವಿ ತಯಾರಿ ಬಗ್ಗೆ ವಿವರಿಸಿ ಸ್ಪರ್ಧೆ ಮಾಡುವುದು ಖಚಿತ ಎಂಬುದನ್ನು ಮನದಟ್ಟು ಮಾಡಿಸಿದ್ದೇನೆ ಎಂದರು.

ಒತ್ತಡಕ್ಕೆ ಮಣಿದು ಪಕ್ಷದ ನಾಯಕರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೂ ಕಾರ್ಯಕರ್ತರು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು. ನನ್ನ ಸ್ಪರ್ಧೆ ಕಾಂಗ್ರೆಸ್‌ ವಿರುದ್ಧವಲ್ಲ; ಪಕ್ಷಾಂತರಿಗಳ ವಿರುದ್ಧ ಎಂದು ದಿನೇಶ್ ಹೇಳಿದರು.

ಕಾಂಗ್ರೆಸ್‌ ಠೇವಣಿ ಕಳೆದುಕೊಳ್ಳುತ್ತಿದ್ದ ಕಾಲದಿಂದ ಸ್ಪರ್ಧಿಸುತ್ತಿದ್ದು ಹಂತ ಹಂತವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿ ಹೊಸಬರಾಗಿರುವ ಕಾರಣ ಮೇಲ್ನೋಟಕ್ಕೆ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ ಹಾಗೂ ನನ್ನ ನಡುವೆ ಹಣಾಹಣಿ ಇರುವಂತೆ ಕಾಣುತ್ತಿದೆ. ಮತದಾರರು ಮತ ಚಲಾಯಿಸುವಾಗ ಆಯೋಗದ ನಿರ್ದೇಶನ ಪಾಲಿಸದ ಪರಿಣಾಮ ಶೇ 8ರಷ್ಟು ಮತಗಳು ಅಸಿಂಧುವಾಗುತ್ತಿವೆ. ಈ ಬಾರಿ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಮತ ಹಾಕಬೇಕು ಎಂದು ಮನವಿ ಮಾಡಿದರು.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 85,000ಕ್ಕೂ ಹೆಚ್ಚು ಮತಗಳಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು 27,000, ಮಂಗಳೂರಿನಲ್ಲಿ 19,000, ಉಡುಪಿಯಲ್ಲಿ 17,000, ಚಿಕ್ಕಮಗಳೂರಿನಲ್ಲಿ 11,000, ದಾವಣಗೆರೆಯಲ್ಲಿ 6,500, ಕೊಡಗಿನಲ್ಲಿ 4,000 ಮತದಾರರು ಇದ್ದಾರೆ ಎಂದು ದಿನೇಶ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್‌, ಈಶ್ವರ್‌, ಸದಾಶಿವ್, ನಾದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT