ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪಠ್ಯದ ಜೊತೆ ನೈತಿಕ ಶಿಕ್ಷಣವೂ ಅಗತ್ಯ

ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಭಿಮತ
Published 7 ಡಿಸೆಂಬರ್ 2023, 15:52 IST
Last Updated 7 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಜಾನಪದ ಕಲೆಯಾಗಿರುವ ಯಕ್ಷಗಾನ ಕಲಾವಿದರು ಹಾಗೂ ಕಲಾಸಕ್ತರ ಪರಿಶ್ರಮದಿಂದ ತಲೆಮಾರಿನಿಂದ ತಲೆಮಾರಿಗೆ ಸದೃಢವಾಗಿ ಬೆಳೆಯುತ್ತಾ ಬಂದಿದೆ ಎಂದು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೇಷಭೂಷಣ, ಕುಣಿತ, ಹಾಡುಗಾರಿಕೆ, ಮಾತುಗಾರಿಕೆ ಹೀಗೆ ಎಲ್ಲ ಪ್ರಕಾರಗಳನ್ನು ಒಳಗೊಂಡಿರುವ ಯಕ್ಷಗಾನ ಕಲೆ ಎಲ್ಲ ವರ್ಗದವರ ಹೃದಯವನ್ನು ತಟ್ಟಬಲ್ಲಂತಹ ಶಕ್ತಿ ಹೊಂದಿದೆ. ಯಕ್ಷಗಾನ ಕಲಿಕೆ ಮನುಷ್ಯನಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದರ ಜತೆಗೆ ಮನರಂಜನೆ ನೀಡುತ್ತದೆ. ಸರ್ವತೋಮುಖ ಬೆಳವಣಿಗೆಯ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದರು.

ತುಳುನಾಡಿನ ಮಣ್ಣಿನ ಕಲೆಯಾಗಿರುವ ಯಕ್ಷಗಾನ ಉಳಿವಿಗೆ ಸಮಾಜದ ಪ್ರೋತ್ಸಾಹ ಅಗತ್ಯಗತ್ಯ. ಶಾಲಾ ಮಕ್ಕಳಿಗೆ ಪಠ್ಯದ ಶಿಕ್ಷಣ  ಮಾತ್ರವಲ್ಲ; ಕಲಾಪ್ರಕಾರಗಳನ್ನು ಕಲಿಸುವ ಮೂಲಕ ನೈತಿಕ ಶಿಕ್ಷಣವೂ ದೊರೆಯಬೇಕು. ಈ ನಿಟ್ಟಿನಲ್ಲಿ ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯ ಮಾದರಿ ಎಂದು ಸ್ವಾಮೀಜಿ ಶ್ಲಾಘಿಸಿದರು.

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಗೋಕುಲನಾಥ ಪ್ರಭು, ಡಾ.ಜೆ.ಎನ್.ಭಟ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್, ಉಪಾಧ್ಯಕ್ಷ ಎಸ್.ವಿ.ಭಟ್ ಮತ್ತು ವಿ.ಜೆ.ಶೆಟ್ಟಿ ಭಾಗವಹಿಸಿದ್ದರು. ನಿರ್ದೇಶಕರಾದ ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.

ಶಾಲಾ ಮಕ್ಕಳಿಗೆ ‍ಪಠ್ಯದ ಶಿಕ್ಷಣದ ಜತೆಗೆ ಧಾರ್ಮಿಕ ಕಲೆಗಳ ನೈತಿಕ ಶಿಕ್ಷಣವೂ ದೊರೆಯಬೇಕು. ಆದರೆ ಸರ್ಕಾರ ಜಾತ್ಯತೀತ ನಿಲುವುಗಳನ್ನು ಹೊಂದಿರುವ ಕಾರಣ ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.
–ವಿದ್ಯಾಸಾಗರತೀರ್ಥ ಸ್ವಾಮೀಜಿ ಕೃಷ್ಣಾಪುರ ಮಠ

‘ಆತ್ಮವಿಶ್ವಾಸ ಮೂಡಿಸುವ ಯಕ್ಷಶಿಕ್ಷಣ’

2007ರಲ್ಲಿ ಆರಂಭವಾದ ಯಕ್ಷ ಶಿಕ್ಷಣ ಟ್ರಸ್ಟ್‌ ಪ್ರೌಢಶಾಲಾ ಮಕ್ಕಳಿಗೆ ಯಕ್ಷಶಿಕ್ಷಣ ನೀಡುತ್ತಾ ಬಂದಿದ್ದು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೂ ಯಕ್ಷ ಶಿಕ್ಷಣ ವಿಸ್ತರಿಸಬೇಕು ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೂ ಯಕ್ಷ ಶಿಕ್ಷಣ ದೊರೆಯಬೇಕು ಎಂಬ ಕನಸು ಯಕ್ಷಶಿಕ್ಷಣ ಟ್ರಸ್ಟ್‌ನದ್ದು. ಪ್ರತಿವರ್ಷ ಒಂದೂವರೆ ಸಾವಿರ ಮಕ್ಕಳಂತೆ 17 ವರ್ಷಗಳಲ್ಲಿ ಟ್ರಸ್ಟ್‌ ವತಿಯಿಂದ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣ ಪಡೆದುಕೊಂಡಿದ್ದಾರೆ.

ಯಕ್ಷಗಾನ ಕಲಿಕೆ ಮಕ್ಕಳ ಬೌದ್ಧಿಕ ಬೆಳವಣಿಗೆಗೂ ಪೂರಕವಾಗಲಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿಯೂ ಯಕ್ಷ ಶಿಕ್ಷಣ ಸಹಕಾರಿಯಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಗ್ರಾಮೀಣ ಭಾಗದ ಮಕ್ಕಳಿಗೂ ಯಕ್ಷಶಿಕ್ಷಣ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್‌ ತಿಳಿಸಿದರು.

ಟ್ರಸ್ಟ್‌ನ ಸಾರ್ಥಕ ಕಾರ್ಯದ ಹಿಂದೆ ಯಕ್ಷಗಾನ ಕಲಾರಂಗದ ಕೊಡುಗೆ ದೊಡ್ಡದು. ಯಕ್ಷಗಾನ ಕಲಿತ ವಿದ್ಯಾರ್ಥಿಗಳಿಗೆ ರಾಜಾಂಗಣದಲ್ಲಿ ಅವಕಾಶ ನಿಡುವ ಮೂಲಕ ಅಷ್ಠಮಠಗಳು ಟ್ರಸ್ಟ್‌ನ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿವೆ. ಶಾಸಕರಾದ ಯಶ್‌ಪಾಲ್ ಸುವರ್ಣ ಗುರ್ಮೆ ಸುರೇಶ್ ಶೆಟ್ಟಿ ಕಿರಣ್ ಕೊಡ್ಗಿ ಅವರ ಸಹಕಾರವೂ ದೊಡ್ಡದು ಎಂದು ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT