ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗಳಲ್ಲಿ ಮರಳು ಲಭ್ಯ: ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ

ಅ.5ರಿಂದ ಮರಳು ತೆಗೆಯುವ ಪ್ರಕ್ರಿಯೆ: ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ
Last Updated 19 ಸೆಪ್ಟೆಂಬರ್ 2022, 13:41 IST
ಅಕ್ಷರ ಗಾತ್ರ

‌ಉಡುಪಿ: ಹೊಸ ಮರಳು ನೀತಿಯ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳ ಹಾಗೂ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಅ.5 ರಿಂದ ತೆಗೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದುಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ ಸೂಚಿಸಿದರು.

ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ ನೀಡುವ ತಂತ್ರಾಂಶ ಬಳಕೆ ಬಗ್ಗೆ ಪಂಚಾಯಿತಿ ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಇಒಗಳು ಮತ್ತು ಪಿಡಿಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೊಸ ಮರಳು ನೀತಿ 2020 ಮತ್ತು 2021ರ ಪ್ರಕಾರ ಮೊದಲ, ಎರಡನೇ ಮತ್ತು ಮೂರನೇ ಶ್ರೇಣಿಯ ಹಳ್ಳ ಮತ್ತು ತೊರೆಗಳಲ್ಲಿರುವ ಮರಳು ನಿಕ್ಷೇಪಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಅವಕಾಶ ಇದೆ. ಅದರಂತೆ ಜಿಲ್ಲೆಯ ಕಾರ್ಕಳ, ಹೆಬ್ರಿ, ಕಾಪು, ಕುಂದಾಪುರ ಮತ್ತು ಬೈಂದೂರು ತಾಲ್ಲೂ ಪಂಚಾಯಿತಿ ವ್ಯಾಪ್ತಿಯಲ್ಲಿ 35 ಮರಳು ನಿಕ್ಷೇಪಗಳಿದ್ದು 49,903 ಮೆಟ್ರಿಕ್ ಟನ್ ಮರಳು ಲಭ್ಯತೆ ಗುರುತಿಸಲಾಗಿದ್ದು, ಅ.5 ರಿಂದ ತೆಗೆಯಲು ಪಂಚಾಯಿತಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮರಳು ನಿಕ್ಷೇಪಗಳನ್ನು ತೆರವುಗೊಳಿಸಲು ಈಗಾಗಲೇ ಪಂಚಾಯಿತಿಗಳಿಗೆ ಆಶಯ ಪತ್ರಗಳನ್ನು ನೀಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರು ಮತ್ತು ಸರ್ಕಾರಿ ಸ್ಥಳೀಯ ಕಾಮಗಾರಿಗಳ ಗುತ್ತಿಗೆದಾರರು, ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾರಾಟದರವನ್ನು ಗ್ರಾಮ ಪಂಚಾಯಿತಿಗಳಿಗೆ ಪಾವತಿಸಿ ರವಾನೆ ಪರವಾನಗಿ ಪಡೆದು, ನಿಯಮಗಳನ್ನು ಅನುಸರಿಸಿ ಸ್ವಂತ ಖರ್ಚಿನಲ್ಲಿ ಮರಳು ತುಂಬಿಸಿ ಸಾಗಾಟ ಮಾಡಬೇಕು ಎಂದರು.

ಗ್ರಾಮ ಪಂಚಾಯಿತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಜಧನ ಹಾಗೂ ಅನ್ವಯವಾಗುವ ಇತರೆ ಶುಲ್ಕಗಳನ್ನು ಪಾವತಿಸಲುಗ್ರಾಹಕರಿಂದ ಶುಲ್ಕ ನಿಗದಿತ ಶುಲ್ಕ ಪಡೆಯಬೇಕು. ವಿಶೇಷ ರಕ್ಷಣಾತ್ಮಕವುಳ್ಳ ಸಾಗಾಣಿಕೆ ಪರವಾನಗಿಯನ್ನು ಗ್ರಾಹಕರಿಗೆ ನೀಡಬೇಕು. ಈ ಪ್ರಕ್ರಿಯೆಗೆ ಅಗತ್ಯವಿರುವ ತಾಂತ್ರಿಕ ತರಬೇತಿ ಹಾಗೂ ನೆರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪಡೆಯಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿರುವ ನಿಕ್ಷೇಪಗಳಲ್ಲಿ ನಿರೀಕ್ಷಿತ ಪ್ರಮಾಣದ ಮರಳು ಇಲ್ಲದಿರುವ ಬಗ್ಗೆ ಅಥವಾ ಆ ಪ್ರದೇಶದಲ್ಲಿ ಮರಳು ತೆಗೆಯಲು ಅಡೆತಡೆಗಳಿದಲ್ಲಿ, ಹೊಸ ಪ್ರದೇಶದಲ್ಲಿ ಮರಳು ಲಭ್ಯವಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ಸ್ಥಳ ಬದಲಾವಣೆಗೆ ಅವಕಾಶವಿದೆ ಎಂದರು.

ಮರಳು ತೆಗೆಯಲು ನಿಗದಿತ ಶುಲ್ಕ ಸಂಗ್ರಹ , ಸಾಗಾಟ ಪರವಾನಗಿ ನೀಡುವ ತಂತ್ರಾಂಶ ಬಳಕೆ ಬಗ್ಗೆ ಕಾರ್ಯಕ್ರಮದಲ್ಲಿ ತರಬೇತಿ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಹಾಗೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT