ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭಾಳ್ವೆ ಸಮಾವೇಶ, ಸೌಹಾರ್ದ ನಡಿಗೆ ಮೇ 14ರಂದು

ಪ್ರೀತಿ, ಸಹಭಾಳ್ವೆ ಹಂಚಲು ಕಾರ್ಯಕ್ರಮ: ಸಮಾಜದ ಎಲ್ಲ ವರ್ಗದವರು ಭಾಗಿ
Last Updated 7 ಮೇ 2022, 16:05 IST
ಅಕ್ಷರ ಗಾತ್ರ

ಉಡುಪಿ: ನಾರಾಯಣ ಗುರು, ಬಸವಣ್ಣ, ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಹಾಗೂ ಬಹುತ್ವದ ಭಾರತವನ್ನು ಕಟ್ಟಲು ಮೇ 14ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಸಂಚಾಲಕ ಕೆ.ಎಲ್‌.ಅಶೋಕ್ ತಿಳಿಸಿದರು.

ಶನಿವಾರ ಮಣಿಪಾಲ್ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಬಾಳ್ವೆ ಉಡುಪಿ ಹಾಗೂ ಸೌಹಾರ್ದ ಸಂಘಟನೆಗಳ ಸಹಯೋಗದಲ್ಲಿ 14ರಂದು ಸಂಜೆ 4 ಗಂಟೆಗೆ ಉಡುಪಿಯ ಮಿಷನ್ ಕಾಂಪೌಂಡ್ ಸಭಾಂಗಣದಲ್ಲಿ ಸಮಾವೇಶ ನಡೆಯಲಿದೆ. ಮಧ್ಯಾಹ್ನ 2ಗಂಟೆಗೆ ಹುತಾತ್ಮರ ಸ್ಮಾರಕದ ಎದುರಿನಿಂದ ಸಾಮರಸ್ಯ ನಡಿಗೆ ಆರಂಭವಾಗಲಿದೆ ಎಂದು ತಿಳಿಸಿದರು.

ಮನುಷ್ಯ ಪ್ರೀತಿ ಹಾಗೂ ಸಹಬಾಳ್ವೆ ಹಂಚುವುದು ಸಮಾವೇಶದ ಆಶಯ. ಗಿರಿಜನ, ಮುಸ್ಲಿಮರು, ಕ್ರೈಸ್ತರು, ದಲಿತ ಮುಖಂಡರು, ರೈತ ಮುಖಂಡರು, ಅಲ್ಪ ಸಂಖ್ಯಾತರು, ಮಹಿಳಾ ಪರ ಹೋರಾಟಗಾರರು, ಅಲೆಮಾರಿ , ಲೈಂಗಿಕ ಅಲ್ಪ ಸಂಖ್ಯಾತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್‌, ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ.ರೊನಾಲ್ಡ್ ಕುಲಾಸೊ, ಸಾಮಾಜಿಕ ಹೋರಾಟಗಾರ ಶಶಿಕಾಂತ್ ಸೆಂಥಿಲ್‌ ಉಪಸ್ಥಿತರಿರಲಿದ್ದಾರೆ.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ಖಾಜಿ ಝೈನುಲ್ ಉಲಾಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕ್ಯಾಥೊಲಿಕ್ ಚರ್ಚ್‌ ಬಿಷಪ್‌ ವರ್ಗೀಸ್ ಮರ್ ಮಕೊರಿಯಸ್‌, ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ ದೇವಿ, ಬೆಳಗಾವಿ ಬಸವ ಧರ್ಮ ಪೀಠದ ಬಸವ ಪ್ರಕಾಶ್ ಸ್ವಾಮೀಜಿ ಸೇರಿದಂತೆ ಸರ್ವಧರ್ಮಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಸಾಮಾಜಿಕ ವಾತಾವರಣ ಕಲುಷಿತಗೊಂಡಿದ್ದು ದ್ವೇಷವನ್ನು ಇತಿಹಾಸವನ್ನಾಗಿ ಬಿಂಬಿಸಲಾಗುತ್ತಿದೆ. ಧರ್ಮ ದ್ವೇಷ ರಾಜಕಾರಣ ಹೆಚ್ಚಾಗಿದೆ. ಇದನ್ನೆಲ್ಲ ನಿರ್ಮೂಲನೆ ಮಾಡುವುದು ಸಹಬಾಳ್ವೆ ಸಮಾವೇಶದ ಉದ್ದೇಶ ಎಂದರು.

ಸೌಹಾರ್ದವನ್ನು ಬಿಂಬಿಸುವ ಟ್ಯಾಬ್ಲೋಗಳು, ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಸಂಚಾಲಕ ಅಮೃತ್ ಶೆಣೈ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಸುಂದರ್ ಮಾಸ್ತರ್‌, ಯಾಸೀನ್ ಮಲ್ಪೆ, ಹುಸೇನ್ ಕೋಡಿಬೆಂಗ್ರೆ, ಉದ್ಯಾವರ ನಾಗೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT